ಕಾರ್ಕಳ, ಜು 26 (DaijiworldNews/HR): ಕಾರ್ಕಳ ಪುರಸಭೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ತಾರತಮ್ಯೆ ಧೋರಣೆ ನಿರಂತರವಾಗಿ ನಡೆಯುತ್ತದೆ. ಪ್ರತಿಪಕ್ಷ ಸದಸ್ಯರಿಗೆ ಚಿಕ್ಕಾಸು ಬೆಲೆನೀಡದೇ ಆಡಳಿತ ವರ್ಗವು ತಮಗೆ ಬೇಕಾದಂತೆ ವರ್ತಿಸುತ್ತಿದೆ. ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳು ದಾಖಲೆಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಕಲಾಪದ ಬಾವಿಗೆ ಇಳಿದು ಧರಣಿ ನಡೆಸಿರುವ ಘಟನೆ ನಡೆದಿದೆ.
ಪುರಸಭೆಯ ಕಲಾಪ ಅರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಸದಸ್ಯ ಶುಭದರಾವ್ ಮಾತನಾಡಿ, ದಲಿತ ಸಮುದಾಯದ ಕುಟುಂಬವೊಂದರ ಮನೆ ದುರಸ್ಥಿಗೆ ನೆರವು ಕೋರಿ ಮೂರು ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ಸಕಾರಣ ನೀಡದೇ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪ್ರಭಾವ ಬೀರಿ ಮತ್ತೊ೦ದು ಕುಟುಂಬಕ್ಕೆ ಸಹಾಯಧನ ನೀಡುತ್ತಿರುವುದು ಸಂಜಸವಲ್ಲ ಎಂಬ ವಾದವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.
ಪುರಸಭಾ ಮಾಜಿ ಅಧ್ಯಕ್ಷೆ ಪ್ರತಿಮಾ ಇದಕ್ಕೆ ಇಂಬು ನೀಡುವಂತೆ ಮಾತನಾಡಿ, ಆಡಳಿತ ನಡೆಸುವವರು ತಮಗೆ ಖುಷಿ ಬಂದಂತೆ ವರ್ತಿಸಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸುವುದಾದರೆ, ಚುನಾಯಿತ ಪ್ರತಿನಿಧಿಗಳಾದ ನಮ್ಮ ಅಗತ್ಯವಾದರೂ ಏನೆಂದು ಪ್ರತಿಕ್ರಿಯೆ ನೀಡಿದರು. ದಲಿತ ಸಮುದಾಯದ ನಾಲ್ವರು ಕೌನ್ಸಿಲರ್ ಇರುವುದರಿಂದ ಪ್ರತ್ಯೇಕವಾದ ಸಮಿತಿಯೊಂದನ್ನು ರೂಪಿಸಿ ದಲಿತ ಶ್ರೇಯೋಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಸಮುದಾಯ ಸಮನ್ವಯಾಧಿಕಾರಿ ಮಲ್ಲಿಕಾ ಉತ್ತರಿಸಿ ಮಾತನಾಡಿ, ದಲಿತ ಮನೆ ದುರಸ್ಥಿಗೆ ಹಲವು ಅರ್ಜಿಗಳು ಬಂದಿದ್ದಾದರೂ ಆರ್ಹ ಅರ್ಜಿಗಳನ್ನು ಪರಿಗಣಿಸಿ ಉಳಿದೆಲ್ಲವನ್ನು ತಿರಸ್ಕರಿಸಲಾಗಿದೆ ಎಂದರು. ಪೂರಕ ದಾಖಲೆ ಇಲ್ಲ ಎಂಬ ಒಂದೇ ಕಾರಣ ನೀಡಿದ ಅರ್ಜಿಯನ್ನು ತಿರಸ್ಕರಿಸುವುದು ಎಷ್ಟೊಂದು ಸಮಂಜಸವೆಂದು ಆಡಳಿತ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು. ಈ ಪ್ರಹಸನದಿಂದ ವಿವಾದವು ತಣ್ಣಗಾಯಿತು.
ಸರ್ವಸದಸ್ಯರ ಸಮ್ಮತಿಯಂತೆ 1 ಅರ್ಜಿಯನ್ನು ಸೇರ್ಪಡೆಗೊಳ್ಳಿಸಿ 12 ಅರ್ಹ ಫಲಾನುಭವಿಗಳೆಂದು ಪರಿಗಣಿಸಿ ತಲಾ ರೂ.26 ಸಾವಿರ ಸಹಾಯಧನ ನೀಡಲು ನಿರ್ಧಾರ ಕೈಗೊಂಡ ಬಳಿಕ ಪ್ರತಿಪಕ್ಷ ಸದಸ್ಯರು ಧರಣಿಯನ್ನು ಹಿಂಪಡೆದರು.
ಕಳೆದ ನಾಲ್ಕು ತಿಂಗಳುಗಳಿಂದ ಪ್ರತಿ ಸಭೆಯಲ್ಲೂ ಬೀದಿ ನಾಯಿಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವ ಕುರಿತು ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಸಭೆಯಲ್ಲಿ ಪ್ರಸ್ತಾಪಿಸಿದರು. ನಾಯಿ ಹಿಡಿಯುವವರು ಶಿವಮೊಗ್ಗದಿಂದ ಬರಬೇಕು. ಕೇವಲ 100 ನಾಯಿಗಳನ್ನು ಮಾತ್ರ ಹಿಡಿದು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವೆಂದು ಮುಖ್ಯಾಧಿಕಾರಿ ರೂಪಾ ಶೆಟ್ಟಿ ತಿಳಿಸಿದರು.
ಅಪಾಯ ಮರಗಳ ಕುರಿತು ನಿರ್ಲಕ್ಷ್ಯ ಸಲ್ಲದು. ಅದ್ದರಿಂದ ಕೆಲವೊಂದು ಸಂದರ್ಭಗಳಲ್ಲಿ ಮಾನವನ ಜೀವಕ್ಕೂ ಕುತ್ತು ಬರಲಿದೆ ಎಂದು ಶುಭದರಾವ್ ಹೇಳಿದರು.
ಕಾಬೆಟ್ಟು ಸರಕಾರಿ ಶಾಲೆಯೊಂದರಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಲೆಗೆ ತೆರಳುವ ರಸ್ತೆಯಲ್ಲಿಯೇ ಒಳಚರಂಡಿ ಚೇಂಬರ್ ಇದ್ದು, ಮಳೆಗಾಲದಲ್ಲಿ ಇದರಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಸೋಸುತ್ತಿದೆ. ಶಾಲಾ ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಶಾಲಾದಿನಗಳಲ್ಲಿ ಓಡಾಡುತ್ತಿದ್ದಾರೆ. ಹಳೆಯದಾಗಿರುವ ಚೇಂಬರ್ ಹಾಗೂ ಮುಚ್ಚಳದಿಂದ ಅಪಾಯ ಎದುರಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷೆ ರಹಮತ್ ಸಭೆಯ ಗಮನಕ್ಕೆ ತಂದರು. ಇದೇ ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಅಗತವಾಗಿ ಬೆಂಚ್ ಹಾಗೂ ಇತರ ಪರಿಕರಗಳನ್ನು ಒದಗಿಸುವಂತೆ ಕೋರಿದರು.
ಇನ್ನು ಜೋಗಲ್ ಬೆಟ್ಟು ರಸ್ತೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಂಚಾರಕ್ಕೆ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ರಸ್ತೆಯನ್ನು ಎತ್ತರಿಸಿ ಸಂಚಾರಕ್ಕೆ ಅನುವು ಮಾಡುವಂತೆ ವಿನ್ನಬೋಲ್ಡ್ ಮೆಡೋನ್ಸಾ ತಿಳಿಸಿದರು.
ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಪುರಸಭಾ ಸಾಮಾನ್ಯಸಭೆಯ ಕಲಾಪವನ್ನು ಗೌರವಿಸಬೇಕು. ಅಗತ್ಯ ದಾಖಲೆಗಳನ್ನು ಹಿಡಿದುಕೊಂಡು ಕಲಾಪದಲ್ಲಿ ಪಾಲ್ಗೊಳ್ಳುವುದರಿಂದ ಸದಸ್ಯರ ಪ್ರಶ್ನೆಗೆ ಆ ಕೂಡಲೇ ಉತ್ತರಿಸಲು ಸಾಧ್ಯವಾಗುತ್ತದೆ. ಸದಸ್ಯರು ಕೇಳುವ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸಲು ಅಧಿಕಾರಿ ವರ್ಗದವರು ಹೆಣಗಾಡುತ್ತಿರುವುದರಿಂದ ಸಾಮನ್ಯ ಸಭೆಯು ಸುಸೂತ್ರವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಕಳ ಪುರಸಭಾಧ್ಯಕ್ಷೆ ಸುಮಾ ಕೇಶವ್ ಅವರ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಪಲ್ಲವಿ ರಾವ್, ಸ್ಥಾಯೀ ಸಮಿತಿ ಅಧ್ಯಕ್ಷೆ ಯೋಗೀಶ್ ದೇವಾಡಿಗ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಉಪಸ್ಥಿತರಿದ್ದರು.