ತುಮಕೂರು, ಜ26(SS): ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ ಎಂದೇ ಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಸಿದ್ದಗಂಗಾ ಆಸ್ಪತ್ರೆಯ ಐಸಿಯು ಕೊಠಡಿ ಇದೀಗ ಪ್ರಾರ್ಥನಾ ಮಂದಿರವಾಗಿ ಬದಲಾಗಿದೆ.
ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿದ್ದ ಕೊಠಡಿ ಇದೀಗ ಬೇರೆ ಯಾವುದೇ ರೋಗಿಗಳಿಗೆ ನೀಡದೆ ಪ್ರಾರ್ಥನ ಮಂದಿರವಾಗಿ ಪರಿವರ್ತನೆ ಮಾಡಲಾಗಿದೆ. ಪ್ರಾರ್ಥನಾ ಮಂದಿರದ ಕೊಠಡಿಯಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ದಿನ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲದೇ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮುನ್ನ ವೈದ್ಯರು, ರೋಗಿಗಳು ಸಂಬಂಧಿಕರು ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಶ್ರೀಗಳು ಇದ್ದ ಕೊಠಡಿ ಪುಣ್ಯಸ್ಥಳವಾಗಿ ಮಾರ್ಪಟ್ಟಿದೆ.
ತುಂಬಾ ವಿಶಾಲವಾದ ಕೊಠಡಿಯಾಗಿದ್ದು, ಸುಮಾರು 50 ಮಂದಿ ಕೂರಬಹುದಾಗಿದೆ, ಜನವರಿ 3ರಂದು ಶ್ರೀಗಳನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಜನವರೀ 15ರ ವರೆಗೂ ಅಲ್ಲಿಯೇ ಚಿಕಿತ್ಸೆ ಕೊಡಲಾಗಿತ್ತು. ಶ್ರೀಗಳಿಗೆ ಮ್ಯೂಸಿಕ್ ಪ್ಲೇಯರ್ ಮೂಲಕ ಕೇಳಿಸುತ್ತಿದ್ದ ಶಿವಸ್ತುತಿಯೂ ಸಹ ಹಾಗೆಯೇ ಮುಂದುವರಿದಿದೆ.
ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರು ಕಂಡಾಗ ಅವರನ್ನು ಚೆನ್ನೈನ ರೇಲಾ ಅವರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದೆವು. ಬಳಿಕ ಅವರನ್ನು ವಾಪಸ್ ಕರೆದುಕೊಂಡು ಬರುವಾಗ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಎಲ್ಲಾ ತಯಾರಿ ಮಾಡಿಕೊಂಡಿದ್ದೆವು. ಆದರೆ ಸ್ವಾಮೀಜಿ ಅವರು ಮಠದಲ್ಲಿಯೇ ಚಿಕಿತ್ಸೆ ನೀಡಿ ಎಂದರು. ಆಗ ನಾವು ಅವರ ಇಚ್ಛೆಯಂತೆ ಮಠದಲ್ಲೇ 15 ದಿನ ಚಿಕಿತ್ಸೆ ನೀಡಿದ್ದೇವೆ ಎಂದು ಆಸ್ಪತ್ರೆ ನಿರ್ದೇಶಕ ಡಾ, ಪರಮೇಶ್ ಹೇಳಿದ್ದಾರೆ.