ಬಾಗಲಕೋಟ, ಜ26(SS): ನಾನು ಯಾವ ಜಾತಿಯ ಪರವಾಗಿಯೂ ಇಲ್ಲ, ಎಲ್ಲ ಜಾತಿಗಳ ಬಡವರ ಪರವಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ನನಗೆ ಚಿಂತನೆಯಿರಲಿಲ್ಲ, ಬೆಂಗಳೂರಿನಲ್ಲಿ ಸನ್ಮಾನ ಸಮಾರಂಭದಲ್ಲಿ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹಾಗೂ ವೀರಶೈವ ಮಠಾಧೀಶರು ಮನವಿ ನೀಡಿ ವೀರಶೈವ ಲಿಂಗಾಯತ ಧರ್ಮಕ್ಕೆ ಒತ್ತಾಯಿಸಿದರು. ಆಗ ಎಲ್ಲರೂ ಸೇರಿಕೊಂಡು ಬನ್ನಿ ನೋಡೋಣ ಎಂದು ಹೇಳಿದ್ದೆ. ವಿರಕ್ತ ಮಠಗಳ ಮಠಾಧೀಶರಿಂದ ಲಿಂಗಾಯತ ಧರ್ಮಕ್ಕೆ ಬೇಡಿಕೆ ಕೇಳಿಬಂದಿತು. ಶೇ.80 ರಷ್ಟು ಲಿಂಗಾಯತ ಧರ್ಮದ ಬಗ್ಗೆ ಬೇಡಿಕೆಯಿತ್ತು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆಗ ಅವಿರೋಧವಾಗಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಶಿಫಾರಸ್ಸು ಮಾಡಲು ಸಭೆ ನಿರ್ಧರಿಸಿತು. ಸಚಿವ ಮಲ್ಲಿಕಾರ್ಜುನ ಕೂಡ ಸಭೆಯಲ್ಲಿದ್ದರು, ಯಾರೂ ವಿರೋಧಿಸಲಿಲ್ಲ ಎಂದು ವಿವರಿಸಿದರು.
ನನ್ನ ಮೇಲೆ ಲಿಂಗಾಯತ ಧರ್ಮ ಒಡೆಯುವ ಆರೋಪ ಹೊರಿಸಲಾಯಿತು. ನಾನೆಲ್ಲಿ ಧರ್ಮ ಹೊಡೆದೆ..? ನಾನು ಮಾಡಿದ್ದು ತಪ್ಪಾ..? ನೀವು ನಮ್ಮೊಂದಿಗೆ ಇರಬೇಕಾಗುತ್ತದೆ. ನಾನೂ ನಿಮ್ಮೊಂದಿಗೆ ಇರಬೇಕಾಗುತ್ತದೆ, ತಪ್ಪು ಎಂದು ನನ್ನನ್ನು ಬಡಿದು ಹಾಕಿದರೆ ಹೇಗೆ ?. ಕೆಲವರಿಗೆ ಹೊಟ್ಟೆ ಉರಿಯಿಂದ ತಡೆದುಕೊಳ್ಳಲು ಆಗಲಿಲ್ಲ, ಅಪ ಪ್ರಚಾರ ಮಾಡಿದರು. ನಾನು ಯಾವ ಜಾತಿಯ ಪರವಾಗಿಯೂ ಇಲ್ಲ, ಎಲ್ಲ ಜಾತಿಗಳ ಬಡವರ ಪರವಾಗಿದ್ದೇನೆ ಎಂದು ಪ್ರತ್ಯೇಕ ಧರ್ಮಕ್ಕಾಗಿ ಶಿಫಾರಸ್ಸು ಮಾಡಿದ ಬೆಳವಣಿಗೆಯನ್ನು ಸಮರ್ಥಿಸಿಕೊಂಡರು.
ಮಧ್ಯಾಹ್ನದ ಬಿಸಿಯೂಟ, ಮಾತೃಪೂರ್ಣ ಯೋಜನೆಗಳು ಎಲ್ಲ ಸಮಾಜದವರಿಗೆ ತಲುಪುತ್ತಿವೆ. ಇವು ಕೆಲವು ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಸಿದ್ದರಾಮಯ್ಯ ಅಹಿಂದ ವರ್ಗಗಳ ಪರ ಎಂದು ಆರೋಪಿಸಲಾಗುತ್ತದೆ. ನಾನು ರೈತರ ಸಾಲ ಮನ್ನಾ ಮಾಡಿದ್ದು ಕೇವಲ ಅಹಿಂದ ಸಮುದಾಯದವರಿಗೆ ಮಾತ್ರ ಸೀಮಿತವಲ್ಲ. ಜಾತಿ ವ್ಯವಸ್ಥೆ ಹೋಗಬೇಕಾದರೆ ಜಾತಿಗಳ ನಡುವೆ ಸಮನ್ವಯತೆಯಿರಬೇಕು. ಸಮಾಜದಲ್ಲಿ ಜಾತಿ ಬಹಳ ಆಳವಾಗಿ ಬೇರೂರಿದೆ, ಸಮನ್ವಯತೆ ಇದ್ದರೆ ಜಾತಿ ಮಾಯವಾಗುತ್ತದೆ. ಸಮಾಜ ಚಲನಶೀಲವಾದರೆ ಜಾತಿ ವ್ಯವಸ್ಥೆ ನಿರ್ಮೂಲನೆಯಾಗುತ್ತದೆ. ಇಲ್ಲವಾದರೆ ಬಡವರು ಬಡವರಾಗಿ, ಶ್ರೀಮಂತರು ಶ್ರೀಮಂತರಾಗಿ ಉಳಿಯುತ್ತಾರೆ' ಎಂದು ವಿಶ್ಲೇಷಿಸಿದರು.