ಉಡುಪಿ, ಜು 25 (DaijiworldNews/HR): ಕೇರಳದಲ್ಲಿ ಪತ್ತೆಯಾದ ದೇಶದ ಮೊದಲ ಮಂಕಿಪಾಕ್ಸ್ ರೋಗಿಯ ಜೊತೆಗೆ ಪ್ರಯಾಣಿಸಿದವರಲ್ಲಿ ಉಡುಪಿ ಜಿಲ್ಲೆಯ ಸುಮಾರು 6 ಮಂದಿ ಕೂಡಾ ಇದ್ದು ಇವರನ್ನು ಇದೀಗ ನಿಗಾವಣೆಯಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಇದುವರೆಗೆ ಮಂಕಿಪಾಕ್ಸ್ ಸಂಬಂಧಿತ ಲಕ್ಷಣ ಇರುವ ಕುರಿತು ಮಾಹಿತ ಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಜಿಲ್ಲಾ ಆಸ್ಪತ್ರೆಯಲ್ಲೂ ಇದಕ್ಕಾಗಿ ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಲಾಗಿದೆ. ಈ ವರೆಗೆ ಯಾರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದರು.
ದೈಜಿವರ್ಲ್ಡ್ ಜೊತೆಗೆ ಮಾತನಾಡಿದ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣ ಕಂಡು ಬಂದ ವ್ಯಕ್ತಿ ಪ್ರಯಾಣಿಸಿದ ವಿಮಾನದಲ್ಲಿಯೇ ಉಡುಪಿ ಜಿಲ್ಲೆಯ ಕೆಲವೊಂದು ಮಂದಿ ಕೂಡಾ ಪ್ರಯಾಣಿಸಿದ್ದು ಇವರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ಸುಮಾರು 6 ಮಂದಿ ಕೇರಳದ ವ್ಯಕ್ತಿಯ ಸೀಟಿನ ಹತ್ತಿರವೇ ಕುಳಿತುಕೊಂಡು ಪ್ರಯಾಣಿಸಿದ ಕಾರಣ ವಿಶೇಷ ನಿಗಾ ವಹಿಸಲಾಗಿತ್ತು. ಆದರೆ ಇವರಲ್ಲಿ ಯಾರಿಗೂ ಮಂಕಿಪಾಕ್ಸ್ ನ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಈಗಾಗಲೇ ಇವರ ಕ್ವಾರಂಟೈನ್ ಅವಧಿ ಕೂಡಾ ಮುಗಿಯುತ್ತಾ ಬಂದಿದೆ ಎಂದು ಹೇಳಿದ್ದಾರೆ.