ಹೊಸದಿಲ್ಲಿ, ಜ26(SS): ಕೇಂದ್ರ ಸರಕಾರ ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ನಾಲ್ವರಿಗೆ ಪದ್ಮ ವಿಭೂಷಣ ಪ್ರಶಸ್ತಿ, 14 ಮಂದಿಗೆ ಪದ್ಮ ಭೂಷಣ ಮತ್ತು 94 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಒಟ್ಟು 112 ಮಂದಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.
ಸಾಲು ಮರಗಳನ್ನು ನೆಟ್ಟು ಬೆಳೆಸಿ ಇತಿಹಾಸ ಸೃಷ್ಟಿಸಿದ ಬೆಂಗಳೂರು ಹೊರವಲಯದ ಮಹಾ ಸಾಧಕಿ ಸಾಲು ಮರದ ತಿಮ್ಮಕ್ಕ, ಖ್ಯಾತ ನೃತ್ಯಪಟು ಪ್ರಭುದೇವ, ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್, ಕಲೆ ಮತ್ತು ಪುರಾತತ್ವ ಶಾಸ್ತ್ರವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ಸಾಧಕಿ ಶಾರದಾ ಶ್ರೀನಿವಾಸನ್, ಬೆಂಗಳೂರಿನ ಐಐಎಸ್ಸಿಯಲ್ಲಿ ಪರಮಾಣು ಭೌತಶಾಸ್ತ್ರ ಪ್ರೊಫೆಸರ್ ಆಗಿರುವ ರೋಹಿಣಿ ಗೋಡ್ಬೋಳೆ ಪದ್ಮಶ್ರೀ ಪ್ರಶಸ್ತಿ ಪಡೆದ ಕನ್ನಡಿಗರು. ರಾಜ್ಯಕ್ಕೆ ಈ ಬಾರಿ ಪದ್ಮವಿಭೂಷಣ, ಪದ್ಮಭೂಷಣ ವಿಭಾಗದಲ್ಲಿ ಯಾವುದೇ ಪ್ರಶಸ್ತಿ ಬಂದಿಲ್ಲ.