ಮಂಗಳೂರು, ಜು 25 (DaijiworldNews/MS): ಬೀಡಿ ಕಾರ್ಮಿಕರ ಕಲ್ಯಾಣಕ್ಕೆ ಕೇಂದ್ರ ಸರಕಾರ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ಹಾಗೂ ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ಸ್ ಯೂನಿಯನ್ (ಎಚ್ಎಂಎಸ್ ಸಂಯೋಜಿತ) ಆಶ್ರಯದಲ್ಲಿ ನಗರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭಾನುವಾರ ಜರಗಿದ ಬೀಡಿ ಕಾರ್ಮಿಕರ ಸಮಾವೇಶ ಹಾಗೂ ಬೀಡಿ ಬದುಕು ಅಧ್ಯಯನ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಬೀಡಿ ಉದ್ಯಮ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆರ್ಥಿಕತೆಗೆ ವಿಶೇಷ ಶಕ್ತಿಯಾಗಿ ಮೂಡಿಬಂದಿದೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ಸ್ವಾವಲಂಬಿ, ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟಿದೆ ಎಂದರು. ಬೀಡಿ ಉದ್ಯಮಕ್ಕೆ ಪ್ರಸ್ತುತ ಶೇ.೨೮ ಜಿಎಸ್ಟಿ ವಿಧಿಸಿರುವುದು ಕಾರ್ಮಿಕರಿಗೆ, ಉದ್ಯಮಕ್ಕೆ ಬಹುದೊಡ್ಡ ಹೊಡೆತ ನೀಡಲಿದೆ. ಅದುದರಿಂದ ಬೀಡಿ ಉದ್ಯಮಕ್ಕೆ ಜಿಎಸ್ಟಿಯಿಂದ ಸಂಪೂರ್ಣ ವಿನಾಯತಿ ನೀಡಬೇಕು.ಬೀಡಿ ಉದ್ದಿಮೆದಾರರು ಉದ್ಯಮವನ್ನು ಮುನ್ನಡೆಸಿಕೊಂಡು ಬಂದು ಬಹುದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಒದಗಿಸಿದ್ದು ಅವರಿಗೆ ಅಭಿನಂದನೆಯನ್ನು ಸಲ್ಲಿಸಲೇ ಬೇಕು ಎಂದವರು ಹೇಳಿದರು.
ಶಾಸಕ ಯು.ಟಿ.ಖಾದರ್ ಅವರು ಮಾತನಾಡಿ ಬೀಡಿ ಕಾರ್ಮಿಕರ ಕಲ್ಯಾಣಕ್ಕೆ ಬೀಡಿ ಕಾರ್ಮಿಕರ ಅಭಿವೃದ್ಧಿ ಮಂಡಳಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೂಪಿಸಬೇಕು ಎಂದು ಹೇಳಿದರು. ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ ಬೀಡಿ ಕಾರ್ಮಿಕರು, ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆದು ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿ ಬೀಡಿ ಕಾರ್ಮಿಕರು ಸಂಘಟಿತರಾಗಿ ಪ್ರಬಲ ಹೋರಾಟ ನಡೆಸಿದಾಗ ಬೇಡಿಕೆಗಳು ಈಡೇರಲು ಸಾಧ್ಯವಾಗುತ್ತದೆ ಎಂದರು.ಗಣೇಶ್ ಬೀಡಿ ಸಂಸ್ಥೆಯ ಪಾಲುದಾರ ಕಾಳಿದಾಸ್, ಮಂಗಳೂರು ಅಂಚೆ ಅಧೀಕ್ಷಕ ಶ್ರೀಹರ್ಷ ಅವರು ಬೀಡಿ ಕಾರ್ಮಿಕರಿಗೆ ಜೀವನ್ ಪ್ರಮಾಣ ಪತ್ರದ ಬಗ್ಗೆ ವಿವರಿಸಿದರು.
ಪ್ರಸ್ತಾವನೆಗೈದ ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ಮಹಮ್ಮದ್ ರಫಿ ಅವರು ದೇಶದಲ್ಲಿ 4.5 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಿರುವ ಬೀಡಿ ಉದ್ಯಮವನ್ನು ಉಳಿಸಲು ಸರಕಾರ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು, ಬೀಡಿ ಕಾರ್ಮಿಕರಿಗೆ ಇಲಾಖೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು. ಎಚ್ಎಂಎಸ್ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಬೀಡಿ ಉದ್ಯಮಿ , ಅಪೂರ್ವ ವಸ್ತುಗಳ ಸಂಗ್ರಾಹಕ ಯಾಸೀರ್ ಕಲ್ಲಡ್ಕ ,ಬೀಡಿ ವರ್ಕರ್ಸ್ ಯೂನಿಯನ್ ್ ಮಹಮ್ಮದ್ ರಫಿ ಅವರನ್ನು ಸಮ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ನಿರೂಪಿಸಿದರು. ಮುರಲೀಧರ ಕಾಮತ್ ಆಶಯ ಗೀತೆ ಹಾಡಿದರು. ಹರೀಶ್ ಕೆ.ಎಸ್. ವಂದಿಸಿದರು. ಸಂಘಟನೆಯ ಇಸ್ಮಾಯಿಲ್ ಡಿ.ಎಸ್. ಸಂಜೀವ ಪೂಜಾರಿ, ಪ್ರಶಾಂತ್, ಪಿ.ಎಚ್.ಮೊಹಮ್ಮದ್ , ಸಯ್ಯದ್ ಹುಸೈನ್ ಕೋಯಾ ಮತ್ತಿತರರು ಉಪಸ್ಥಿತರಿದ್ದರು.