ಮಂಗಳೂರು, ಜು 24 (DaijiworldNews/DB): ಇಂಧನ, ಕನ್ನಡ ಹಾಗೂ ಸಂಸ್ಕೃತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರು ಜು. 24ರ ಭಾನುವಾರದಂದು ನಗರದ ಲೇಡಿಹಿಲ್ ಶಾಲೆಯ ಬಳಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ಸುಮಾರು 48 ಲಕ್ಷ ರೂ. ವೆಚ್ಚದಲ್ಲಿ ಒಂದು ಸುಂದರವಾದ ನಾರಾಯಣ ಗುರು ವೃತ್ತ ಮಾಡಬೇಕೆಂದು ತೀರ್ಮಾನಿಸಿದ್ದು, ಅದರಂತೆ ಇಂದು ಶಂಕುಸ್ಥಾಪನೆಯಾಗಿದೆ. ನಾರಾಯಣಗುರುಗಳು ಪಾದಸ್ಪರ್ಶ ಮಾಡಿದ ಮಂಗಳೂರಿಗೆ ಒಂದು ವಿಶೇಷವಾದ ಆಯಾಮವನ್ನು ನೀಡಬೇಕೆಂದು ಮುಡಾ ಮತ್ತು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಒಂದು ವಿಶೇಷವಾದ ಅಭಿವೃದ್ದಿ ಚಟುವಟಿಕೆಗೆ ಇವತ್ತಿನಿಂದ ಚಾಲನೆ ಕೊಡುತ್ತಿದ್ದೇವೆ. ನಾರಾಯಣ ಗುರುಗಳ ಹೆಸರಿನ ಮುಖಾಂತರ ಸಮಾಜದಲ್ಲಿ ಸಾಮರಸ್ಯ ನಿರ್ಮಾಣವಾಗಬೇಕು. ಅವರ ಹೆಸರು ಬಳಕೆ ಮಾಡುವ ಮುಖಾಂತರ ಮಂಗಳೂರಿನ ಅಭಿವೃದ್ದಿಗೆ ಹೊಸ ಆಯಾಮ ನೀಡುವ ಪ್ರಯತ್ನ ನಡೆಯಲಿದೆ. ಪಾಲಿಕೆ, ಮುಡಾ, ಬಿಜೆಪಿಯು ಗುರುಗಳನ್ನು ವಿಶಿಷ್ಟವಾಗಿ ಕಣ್ಮುಂದೆ ಇಟ್ಟುಕೊಂಡು ಅವರ ಆದರ್ಶಗಳನ್ನು ವಿವಿಧ ಆಯಾಮಗಳಲ್ಲಿ ಪ್ರಕಟಿಸುವ ಪ್ರಯತ್ನ ಮಾಡಲಿದೆ ಎಂದರು.
ಮನೆಗಳಲ್ಲಿ ಹಾರಾಡಲಿ ರಾಷ್ಟ್ರಧ್ವಜ
ವೃತ್ತವನ್ನು ನವರಾತ್ರಿ ವೇಳೆಗೆ ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು. ಹಣಕಾಸಿನ ನೆರವನ್ನು ನೀಡಲಾಗಿದ್ದು, ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದವರು ತಿಳಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ವಿಶೇಷ ಅಭಿಯಾನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆಗಳನ್ನು ಜನ ಮಾನಸಕ್ಕೆ ತಲುಪಿಸುವ ಪ್ರಯತ್ನವನ್ನು ಈ ತಿಂಗಳು ಪೂರ್ತಿ ಮಾಡುತ್ತಿದ್ದೇವೆ. ವಿವಿಧ ಭಾಗಗಳಲ್ಲಿ ರಂಗಾಯಣದ ಮುಖಾಂತರ ನಾಟಕ, ಚಲನಚಿತ್ರ ಪ್ರದರ್ಶನ, ಕರಪತ್ರ ಹಂಚಿಕೆ, ರಥಯಾತ್ರೆ ಮಾಡಲಿದ್ದೇವೆ. ಆಗಸ್ಟ್ 12ರಿಂದ ಎಲ್ಲರ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು. ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಬಳಕೆ ಮಾಡದೆ, ಖಾದಿ, ಕಾಟನ್ ಬಟ್ಟೆಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದರು.
ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಮುಡಾ ನಿಕಟಪೂರ್ವ ಅಧ್ಯಕ್ಷ ರವಿಶಂಕರ್ ಮಿಜಾರ್, ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್, ಬಿರುವೆರ್ ಕುಡ್ಲ ಸ್ಥಾಪಕ ಉದಯ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.