ಅತ್ತೂರು ಸಂತಲಾರೆನ್ಸ್ ಬಸಲಿಕಾ ಪುಣ್ಯಕ್ಷೇತ್ರಕ್ಕೆ ಸಚಿವೆ ಜಯಮಾಲ ಭೇಟಿ
Fri, Jan 25 2019 04:23:19 PM
ಕಾರ್ಕಳ,ಜ 25(MSP): ಜಾತಿ, ಧರ್ಮಕ್ಕಿಂತ ನಂಬಿಕೆ ಮತ್ತು ಮಾನವ ಧರ್ಮವೇ ಶೇಷ್ಠವಾದುದಾಗಿದೆ. ಆದುದರಿಂದಲೇ ಪರಮಾತ್ಮನನ್ನು ಕಾಣುವುದಕ್ಕೆ ಮತ್ತು ಬೇಡುವುದಕ್ಕೆ ಒಂದೆಡೆಯಲ್ಲಿ ಬಂದು ಸೇರುತ್ತಿರುವುದು ಭಾರತೀಯ ಜಾತ್ಯತೀತ ತತ್ವಗಳಿಗೆ ಸಂದ ಗೌರವವಾಗಿದೆ ಎಂದು ಕನ್ನಡ ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದರು.
ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಲಿಕಾ ಪುಣ್ಯಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪುಣ್ಯಕ್ಷೇತ್ರ ಕಾರಣೀಕದ ಬಗ್ಗೆ ವಿವರಿಸಿ ಮಾತನಾಡಿದರು. ಸಂತ ಲಾರೆನ್ಸ್ರ ಆಶೀರ್ವಾದದೊಂದಿಗೆ ಮುಂದಿನ ವರ್ಷಾವಧಿಯಲ್ಲಿ ಸಚಿವೆಯಾಗಿಯೇ ಮುಂದುವರಿದು ಮುಂದಿನ ವರ್ಷಾವಧಿಯಲ್ಲಿ ನಡೆಯುವ ವಾರ್ಷಿಕ ಮಹೋತ್ಸವದಲ್ಲಿ ಪಾಲ್ಗೊಳ್ಳುವ ವಿಶ್ವಾಸವನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಬಸಿಲಿಕ ಪುಣ್ಯ ಕ್ಷೇತ್ರದ ನಿರ್ದೇಶಕ ಹಾಗೂ ಪ್ರಧಾನ ಧರ್ಮಗುರು ವಂದನೀಯ ಜಾರ್ಜ್ ಡಿಸೋಜಾ ಅವರ ಆಶೀರ್ವಾದ ಪಡೆದ ಸಚಿವೆ ಜಯಮಾಲ ಅವರು ಸಂತಲಾರೆನ್ಸ್ರಿಗೆ ಆಳೆತ್ತರದ ಹೊಂಬತ್ತಿ ಉರಿಸಿದರು. ಧರ್ಮಕೇಂದ್ರದ ಸಹಾಯಕ ಧರ್ಮಗುರು ವಂದನೀಯ ಜೆನ್ಸಿಲ್ ಆಳ್ವ, ಪಾಲನಾ ಮಂಡಳಿಯ ಜೋನ್ ಡಿಸಿಲ್ವ,ಸಂತೋಷ್ ಡಿಸಿಲ್ವ, ತಹಶೀಲ್ದಾರ್ ಮಹಮ್ಮದ್ ಇಸಾಕ್, ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್, ತಾಲೂಕು ಪಂಚಾಯತ್ ಸದಸ್ಯ ಸುಧಾಕರ ಶೆಟ್ಟಿ, ಪುರಸಭಾ ಸದಸ್ಯ ಶುಭದರಾವ್, ರಹಮತ್ ಶೇಖ್ , ಪ್ರತಿಮಾ ರಾಣೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ಸುಭೀತ್ ಎನ್.ಆರ್, ಮಹಮ್ಮದ್ ಶರೀಫ್ ಮೊದಲಾದವರು ಉಪಸ್ಥಿತರಿದ್ದರು.