ಕಾಪು, ಜು 23 (DaijiworldNews/DB): ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ತುಂಬಿದ ಹೊಂಡಕ್ಕೆ ಬಿದ್ದ ಕಾರು ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಡಿವೈಡರ್ ಏರಿ ನಿಂತ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಬಿದ್ದಿದ್ದು, ಮಳೆಯಿಂದಾಗಿ ಈ ಹೊಂಡದಲ್ಲಿ ನೀರು ತುಂಬಿತ್ತು. ಇದನ್ನು ತಿಳಿಯದೇ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರು ಹೊಂಡಕ್ಕೆ ಬಿದ್ದು, ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಎರಡು ತುಂಡಾಗಿ ರಸ್ತೆ ಮೇಲೆ ಬಿದ್ದಿದೆ. ಅಲ್ಲದೆ, ಕಾರು ಡಿವೈಡರ್ ಏರಿ ನಿಂತಿದೆ. ಬೆಳಗ್ಗೆ ಮಣಿಪಾಲಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ಚಾಲಕಿ ಅಪಾಯದಿಂದ ಪಾರಾಗಿದ್ದಾರೆ.
ಈ ಹಿಂದೆಯೂ ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂತಹ ಅವಾಂತರಗಳಾಗಿದ್ದು, ಹೆದ್ದಾರಿ ಜೀವ ಬಲಿಗಾಗಿ ಕಾಯುತ್ತಿದೆ. ಆದರೆ ಸಂಬಂಧಪಟ್ಟವರು ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.