ಉಳ್ಳಾಲ,ಜು 22 (DaijiworldNews/SM): ರೈಲ್ವೇ ಇಲಾಖೆ ಗೋಡೌನ್ನಲ್ಲಿರಿಸಲಾದ ಲಕ್ಷಾಂತರ ಬೆಲೆಬಾಳುವ ವಿದ್ಯುತ್ ತಂತಿ ಕಳವು ನಡೆಸಿ ಪರಾರಿಯಾಗುತ್ತಿದ್ದ ಟೆಂಪೋ ವಾಹನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಉರುಳಿ ಬಿದ್ದು ಇಬ್ಬರು ಮಹಿಳೆಯರು ಹಾಗೂ ಓರ್ವ ಯುವಕ ಗಾಯಗೊಂಡು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನದಲ್ಲಿದ್ದ ಟೆಂಪೋ ಚಾಲಕನನ್ನು ಉಳ್ಳಾಲ ಪೊಲೀಸರು ವಶಕ್ ಕೆಪಡೆದುಕೊಂಡು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ತಮಿಳುನಾಡು ಮೂಲದವರಾದ ಸೂಟರ್ ಪೇಟೆಯಲ್ಲಿರುವ ವೆಂಕಟೇಶ, ಹೊಯ್ಗೆಬಝಾರಿನಲ್ಲಿರುವ ಜಯಲಕ್ಷ್ಮೀ, ನಂದಿನಿ ಹಾಗೂ ಮುಲ್ಕಿಯಲ್ಲಿರುವ ರಾಜ್ ಕುಮಾರ್ ಟೆಂಪೋದಲ್ಲಿದ್ದವರು.
ಇಬ್ಬರು ಮಹಿಳೆಯರು ಹಾಗೂ ವೆಂಕಟೇಶನ ಮೇಲೆ ಈ ಹಿಂದೆಯೇ ರೈಲ್ವೇ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣವಿದೆ. ಆರೋಪಿಗಳು ಸೋಮೇಶ್ವರ ಬಳಿ ರೈಲ್ವೇ ಕಾಮಗಾರಿಗೆ ಗೋಡೌನ್ ನಲ್ ಲಿಇರಿಸಲಾದ ವಿದ್ಯುತ್ ತಂತಿಯನ್ನು ಟೆಂಪೋದಲ್ಲಿ ಕಳವು ನಡೆಸಿ ಮಂಗಳೂರು ಕಡೆಗೆ ತೆರಳುವವರಿದ್ದರು.
ಸೋಮೇಶ್ವರದಿಂದ ಉಳ್ಳಾಲ ಮೂಲಕ ತೊಕ್ಕೊಟ್ಟು ಕಡೆಗೆ ಬರುವಾಗ ಮಂಗಳೂರು ರಸ್ತೆಯೆಂದು ತಪ್ಪಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ರಸ್ತೆಯಲ್ಲಿ ಟೆಂಪೋ ಇಳಿಸಿದ ಚಾಲಕನಿಗೆ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ಕಳೆದು ಟೆಂಪೋ ಉರುಳಿಬಿದ್ದಿದೆ.
ಪರಿಣಾಮ ಹಿಂಬದಿಯಿದ್ದ ಜಯಲಕ್ಷ್ಮೀ ಹಾಗೂ ನಂದಿನಿ ರಸ್ತೆಗೆ ಉರುಳಿ ಬಿದ್ದು, ಅವರ ಮೇಲೆ ಕಬ್ಬಿಣದ ತಂತಿಗಳು ಬಿದ್ದು ಏಳಲಾಗದ ಸ್ಥಿತಿಯಲ್ಲಿದ್ದರು. ಈ ವೇಳೆ ವೆಂಕಟೇಶ ಮತ್ತು ರಾಜ್ ಕುಮಾರ್ ರಕ್ಷಣೆಗೆ ಬೊಬ್ಬಿಟ್ಟಾಗ ಸ್ಥಳೀಯರು ಆಗಮಿಸಿ ತಂತಿಯಡಿಯಿಂದ ಮಹಿಳೆಯರಿಬ್ಬರನ್ನು ರಕ್ಷಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆದಾಖಲಿಸಿದ್ದಾರೆ.
ಟೆಂಪೋದಲ್ಲಿದ್ದ ಇಬ್ಬರು ಪುರುಷರು ಸಮರ್ಪಕವಾಗಿ ಉತ್ತರಿಸದೇ ಇದ್ದಾಗ ಸಂಶಯಗೊಂಡ ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವೆಂಕಟೇಶನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಆನಂತರ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ್ದಾರೆ.
ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.