ಮಂಗಳೂರು, ಜು 22 (DaijiworldNews/SM): ಕಂಬಳ ಓಟಗಾರ ಶ್ರೀನಿವಾಸ ಗೌಡ ಮತ್ತು ನನ್ನ ವಿರುದ್ಧ ಆರೋಪ ಮಾಡಿರುವ ಲೋಕೇಶ್ ಶೆಟ್ಟಿ ವಿರುದ್ಧ ಮಾನ ನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದು ಕಂಬಳ ಅಕಾಡೆಮಿಯ ಸದಸ್ಯ ಗುಣಪಾಲ ಕಡಂಬ ಹೇಳಿದ್ದಾರೆ.
ಈ ಬಗ್ಗೆ ನಗರದ ಪ್ರೆಸ್ಕ್ಲಬ್ನಲ್ಲಿ ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಿ, ಲೋಕೇಶ್ ಶೆಟ್ಟಿ ಅವರು ನನ್ನ ಹಾಗೂ ಶ್ರೀನಿವಾಸ ಗೌಡ ವಿರುದ್ಧ ಆರೋಪಗಳನ್ನು ಮಾಡುವ ಮೂಲಕ ಇಡೀ ಕಂಬಳ ವ್ಯವಸ್ಥೆಯನ್ನು ಅವಮಾನಿಸಿದ್ದಾರೆ. ತನ್ನ ತೇಜೋವಧೆ ಮಾಡುವುದು ಈ ದೂರಿನ ಉದ್ದೇಶದ್ದಾಗಿದೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರು ಸತ್ಯಕ್ಕೆ ದೂರವಾಗಿದೆ. ಮಾತ್ರವಲ್ಲದೆ ನಮ್ಮ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ.
ಅಂತಹ ಯಾವುದೇ ಮೋಸ, ವಂಚನೆ ನಡೆದಿಲ್ಲ. ಕಂಬಳದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಲೇಸರ್ ಬೀಮ್ ನೆಟ್ವರ್ಕ್ ಸಿಸ್ಟಮ್ ಅಳವಡಿಸಲಾಗಿದೆ. ಬಳಿಕ ಇಲೆಕ್ಟ್ರಾನಿಕ್ ಟೈಮಿಂಗ್ ವ್ಯವಸ್ಥೆ ಅಳವಡಿಸಲಾಗಿತ್ತು. ಕಳೆದ ಒಂಭತ್ತು ವರ್ಷಗಳಿಂದ ಈ ವ್ಯವಸ್ಥೆ ಜಾರಿಯಲ್ಲಿದೆ. ಈ ವ್ಯವಸ್ಥೆಯನ್ನು ಕಾಸರಗೋಡಿನ ಪೈವಳಿಕೆ ಕಂಬಳಕ್ಕೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಬೆಂಗಳೂರು ಘಟಕದ ಮುಖ್ಯಸ್ಥ ಕರ್ನಲ್ ಸಂಜಯ್ ಮತ್ತು ಅವರ ತಂಡ ಬಂದು ವ್ಯವಸ್ಥೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ನನ್ನ ನೇತೃತ್ವದ ಕಂಬಳ ಅಕಾಡೆಮಿಯ ಚಟುವಟಿಕೆಗಳನ್ನು ಮತ್ತು ನನ್ನ ವೈಯಕ್ತಿಕ ಶ್ರೇಯಸ್ಸು ಸಹಿಸದೆ ಈ ದೂರು ನೀಡಲಾಗಿದೆ ಎಂದು ಆರೋಪಿಸಿದರು.
ಶ್ರೀನಿವಾಸ ಗೌಡರು ಸಾಧನೆ ಮಾಡಿದಾಗ ಅವರನ್ನು ಹುಸೇನ್ ಬೋಲ್ಟ್ ಗೆ ಹೋಲಿಸಿ ನಾವು ಪತ್ರಿಕಾ ಪ್ರಕಟಣೆ ನೀಡಿಲ್ಲ. ಖ್ಯಾತ ನಿರ್ದೇಶಕರೊಬ್ಬರು ಕಂಬಳದ ಬಗ್ಗೆ ಚಲನ ಚಿತ್ರ ಮಾಡುತ್ತಿದ್ದು ಇದಕ್ಕೆ ಎಲ್ಲಾ ಪೂರಕ ಮಾಹಿತಿ ನೀಡಿದ್ದೇನೆ. ಸಿನೆಮಾದಲ್ಲಿ ಶ್ರೀನಿವಾಸ ಗೌಡ ಪ್ರಧಾನ ಪಾತ್ರ ನಿರ್ವಹಿಸುತ್ತಿರುವುದರಿಂದ ಅವರ ವರ್ಚಸ್ಸು ಕುಗ್ಗಿಸಲು ಅಕಾಡೆಮಿಯ ವಿರುದ್ಧ ಲೇಸರ್ ಬೀಮ್ ಸಿಸ್ಟಮನ್ನು ದೂರಲಾಗುತ್ತಿದೆ. ಕಂಬಳದ ಮ್ಯೂಸಿಯಂ ಮಾಡಬೇಕೆಂಬ ಇರಾದೆ ನನ್ನದು.
ಅದಕ್ಕಾಗಿ ಅದಾನಿ ಗ್ರೂಪ್ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ದೇಣಿಗೆ ಪಡೆದಿಲ್ಲ. ದೇಣಿಗೆ ಪಡೆದಿರುವುದಾಗಿ ಸುಳ್ಳು ಆರೋಪ ಮಾಡಲಾಗಿದೆ ಎಂದರು. ಈ ಸಂದರ್ಭ ಅಕಾಡೆಮಿ ಸದಸ್ಯ ಸುರೇಶ್ ಕೆ. ಪೂಜಾರಿ ಮತ್ತು ರತ್ನಾಕರ್ ಉಪಸ್ಥಿತರಿದ್ದರು.