ಬಂಟ್ವಾಳ, ಜು 22 (DaijiworldNews/SM): ತಾಲೂಕು ಅಜ್ಜಿಬೆಟ್ಟು ಗ್ರಾಮದ ವಾಮದಪದವಿನಲ್ಲಿರುವ ಸ.ಪ.ಪೂ ಕಾಲೇಜಿನ ಬಿಸಿಎಂ ವಿದ್ಯಾರ್ಥಿ ನಿಲಯದ ಪಿಯುಸಿ ವಿದ್ಯಾರ್ಥಿಗಳಿಗೆ ಅದೇ ವಿದ್ಯಾರ್ಥಿ ನಿಲಯದ ಪದವಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ಜು. 20ರಂದು ಸಂಭವಿಸಿದ್ದು, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಿದ್ಯಾರ್ಥಿ ನಿಲಯದಲ್ಲಿ ವಾಮದಪದವು ಪದವಿ ಪೂರ್ವ ಕಾಲೇಜಿನ 14 ವಿದ್ಯಾರ್ಥಿಗಳು ವಾಸವಿದ್ದು, ರಾತ್ರಿ ಗಂಟೆ 9.30ರ ಬಳಿಕ ಇವರಿಗೆ ವಾಮದಪದವು ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಶರತ್ ಎಸ್., ಅಭಿಷೇಕ್, ಸುದೀಪ್, ರಾಕೇಶ್ ಹಾಗೂ ಸಂಗಡಿಗರು ಸೇರಿ ಬೆಲ್ಟ್, ವಿಕೆಟ್ ಗಳಿಂದ ಹಲ್ಲೆ ಮಾಡಿ, ಈ ಬಗ್ಗೆ ಯಾರಿಗಾದರೂ ದೂರು ನೀಡಿದರೆ ಮತ್ತೆ ಹೊಡೆಯುವುದಾಗಿ ಜೀವ ಬೆದರಿಕೆ ಹಾಕಿದ್ದರು.
ಹಲ್ಲೆಯಿಂದ ಗಾಯಗೊಂಡ ವಿದ್ಯಾರ್ಥಿಗಳನ್ನು ಪ.ಪೂ.ಕಾಲೇಜಿನ ಪ್ರಾಂಶುಪಾಲ ಶ್ರೀಧರ ಎಚ್.ಜಿ. ಅವರು ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸಗಾಗಿ ಕಳುಹಿಸಿದ್ದರು. ಘಟನೆ ಕುರಿತು ಅವರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿ ನಿಲಯದಲ್ಲಿ ಖಾಯಂ ವಾರ್ಡನ್ ಇರದಿರುವುದೇ ವಿದ್ಯಾರ್ಥಿಗಳ ಸ್ವೇಚ್ಛಾಚಾರಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಿಸಿಎಂ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದು, ವಿದ್ಯಾರ್ಥಿಗಳನ್ನು ವಿದ್ಯಾರ್ಥಿನಿಲಯದಿಂದ ಡಿಬಾರ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.