ಉಡುಪಿ, ಜು 22 (DaijiworldNews/DB): ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಸಮೀಪ ಹೊಂಡ ತಪ್ಪಿಸಲು ಹೋದ ಕಾರು ಗದ್ದೆಗೆ ಬಿದ್ದ ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದ ಪತ್ರಕರ್ತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಡುಬಿದ್ರೆಯ ಪತ್ರಕರ್ತ ಹಮೀದ್ ಪಡುಬಿದ್ರೆ ತಮ್ಮ ಸ್ವಿಫ್ಟ್ ಕಾರನ್ನು ಉಡುಪಿಯಿಂದ ಪಡುಬಿದ್ರೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಹೊಂಡವನ್ನು ತಪ್ಪಿಸಲು ಯತ್ನಿಸಿದ ವೇಳೆ ಅವರ ಕಾರು ರಸ್ತೆಯಿಂದ ಗದ್ದೆಗೆ ಉರುಳಿ ಬಿದ್ದಿದೆ. ಘಟನೆಯಿಂದ ಕಾರು ನಜ್ಜುಗುಜ್ಜಾಗಿದ್ದು, ಹಮೀದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಪು ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.