ಕುಂದಾಪುರ, ಜು 22(DaijiworldNews/DB): ಬೈಂದೂರು ಸಮೀಪದ ಉಪ್ಪುಂದದ ಪರಿಚಯ ಹೋಟೆಲ್ಗೆ ಬಂದಿದ್ದ ಅನ್ಯಕೋಮಿನ ಜೋಡಿಯೊಂದನ್ನು ತಡೆದು ಸಾರ್ವಜನಿಕರು ಬೈಂದೂರು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ಗುಜಿರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಮೀರ್ ಆಲಿ (45) ಎಂಬಾತ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಎರ್ಟಿಕಾ ಕಾರಿನಲ್ಲಿ ಹಿಂದೂ ಧರ್ಮದ ಸುಮಾರು 28 ವರ್ಷದ ಯುವತಿಯೊಂದಿಗೆ ಉಪ್ಪುಂದದ ಪರಿಚಯ ಹೋಟೇಲ್ಗೆ ಬಂದಿದ್ದು ಲಾಡ್ಜ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವಿಚಾರ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ಗೊತ್ತಾಗಿ ಹೋಟೆಲ್ಗೆ ಬಂದಿದ್ದು, ಈ ವೇಳೆ ಗಲಾಟೆ ಆರಂಭವಾಗಿದೆ. ಗಲಾಟೆ ನಡೆಯುತ್ತಿರುವುದು ಗಮನಕ್ಕೆ ಬಂದ ಕೂಡಲೇ ಜೋಡಿ ಕೋಣೆಯಿಂದ ಹೊರ ಬಂದು ಕಾರಿನಲ್ಲಿ ಹೊರಡಲನುವಾಗಿದ್ದಾರೆ. ಈ ಸಂದರ್ಭ ಹೊರಗಡೆ ಸೇರಿದ ಗುಂಪು ಥಳಿಸಿದೆ. ಬಳಿಕ ಪೊಲೀಸರಿಗೆ ಸುದ್ಧಿ ಮುಟ್ಟಿ ಪೊಲೀಸರು ಜೋಡಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಯುವತಿ ಅಮೀರ್ ಆಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ. ಯುವತಿಯ ಮನೆಯವರಿಗೆ ಪೊಲೀಸರು ಮಾಹಿತಿ ನೀಡಿದ್ದು, ಮನೆಯವರು ಠಾಣೆಗೆ ಬಂದು ರಾಜಿಯಲ್ಲಿ ಪ್ರಕರಣ ಇತ್ಯರ್ಥಪಡಿಸಿದ್ದಾರೆ ಎಂದು ತಿಳಿದು ಬಂದಿದೆ.