ಪುತ್ತೂರು, ಜು 22(DaijiworldNews/DB): ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆಗಿಳಿದ ಪುತ್ತೂರು ಗ್ರಾಮಾಂತರ ಪೊಲೀಸರ ತಂಡವು ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರನ್ನು ಕಾಸರಗೋಡು ಕುಂಬ್ಳೆ ಬಂಬ್ರಾಣ ಲಕ್ಷ್ಮಮ್ವೀಡ್ ಕಾಲೊನಿಯ ನಿವಾಸಿ ಫೈಝಲ್ ಎ. (37) ಅಲಿಯಾಸ್ ಫೈಝಲ್ ಅಲಿಯಾಸ್ ಪಗ್ಗು ಹಾಗೂ ಕಾಸರಗೋಡು ಸೀತಂಗೊಳಿ ರಾಜೀವ್ಗಾಂಧಿ ಕಾಲೊನಿಯ ಅಬ್ದುಲ್ ನಿಸಾರ್ (19) ಎಂದು ಗುರುತಿಸಲಾಗಿದೆ.
ರೆಂಜದಿಂದ ಚೂರಿಪದವಿನ ನಿಡ್ಬಳ್ಳಿಯ ಮನೆಗೆ ಆಗಮಿಸುತ್ತಿದ್ದ ರತ್ನಾ ಎಂಬ ಮಹಿಳೆ ಬೆಟ್ಟಂಪಾಡಿಯ ಕೋನಡ್ಕಕ್ಕೆ ತಲುಪುವ ವೇಳೆ ಕೆಂಪು ಬಣ್ಣದ ಬೈಕ್ನಲ್ಲಿ ಆಗಮಿಸಿದ ಇಬ್ಬರು ಆರೋಪಿಗಳು ರತ್ನಾ ಅವರ ಮಂಗಳಸೂತ್ರವನ್ನು ಎಳೆದು ಪರಾರಿಯಾಗಿದ್ದರು. ಈ ಸಂಬಂಧ ಮಹಿಳೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಗೆ ಮತ್ತು ಪಿಎಸ್ಐ ಉದಯರವಿ ಎಂ.ವೈ. ನೇತೃತ್ವದಲ್ಲಿ ತಂಡ ರಚಿಸಿದ ಪೊಲೀಸರು ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಮಂಗಳಸೂತ್ರ, ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವುಗೈದಿದ್ದ ಒಂದು ಬೈಕ್ ಹಾಗೂ ಕಳ್ಳತನದ ವೇಳೆ ಉಪಯೋಗಿಸಿ ಬುಲೆಟ್ ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ.
ಕುದ್ದುಪದವಿನಲ್ಲಿ ಜಗನ್ನಾಥ್ ಶೆಟ್ಟಿ ಎಂಬವರಿಗೆ ಸೇರಿದ ಪೆಟ್ರೋಲ್ ಪಂಪ್ನಲ್ಲಿ ಕಳವು, ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶಿಮಠದಲ್ಲಿ ಒಂದು ಗೂಡ್ಸ್ ಟೆಂಪೋವನ್ನು ಕಳವು ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ ಕಳವು ಪ್ರಕರಣವೂ ಇಬ್ಬರ ಮೇಲೆ ದಾಖಲಾಗಿದೆ. ಬಂಧಿತರ ಪೈಕಿ ಫೈಝಲ್ ಎಂಬಾತ ಉಳ್ಳಾಲ, ಮಂಜೇಶ್ವರ, ಕುಂಬ್ಳೆ ಮತ್ತು ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ.