ಕಾರ್ಕಳ, ಜು 22 (DaijiworldNews/MS): ಫೇಸುಬುಕ್ ಪರಿಚಯವು ಯುವಜೋಡಿಯ ನಡುವೆ ಪ್ರೇಮಾಂಕುರಕ್ಕೆ ಕಾರಣವಾಗಿ ವಿವಾಹ ಬಂಧನಕ್ಕೆ ಕಾಲಿಟ್ಟು ವರ್ಷ ಕಳೆಯುತ್ತಿದ್ದಂತೆ ದಾಂಪತ್ಯ ಜೀವನದಲ್ಲಿ ಕಾಣಿಸಿಕೊಂಡ ವೈಮನಸ್ಸಿನ ಹಿನ್ನಲೆಯಲ್ಲಿ ಮಹಿಳೆಯೊಬ್ಬರು ಪೊಲೀಸ್ ಠಾಣಾ ಮೆಟ್ಟಲೇರಿದ ಪ್ರಸಂಗ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ಬೈಲೂರು ಕೌಡೂರಿನ ಸೌಮ್ಯ(33) ಎಂಬವರು ಈ ಕುರಿತು ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸಿದವರು.
ದೂರಿನಲ್ಲಿ ಉಲ್ಲೇಖಿಸಿದಂತೆ ಅವರು ತವರು ಮನೆಯಲ್ಲಿ ನೆಲೆಸಿಕೊಂಡಿದ್ದು, ನಾಲ್ಕೂವರೆ ವರ್ಷಗಳ ಹಿಂದೆ ಫೇಸ್ಬುಕ್ನಲ್ಲಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ ಬೇಕೂರು ನಿವಾಸಿ ಸುನಿಲ್ ಟಿ ಎಂಬುವವರು ಪರಿಚಯವಾಗಿದ್ದರು.
ಪರಿಣಾಮವಾಗಿ ಇಬ್ಬರು ಪರಸ್ಪರ ಪ್ರೀತಿಸಲು ಶುರುಮಾಡಿದರು. 2019 ಮೇ 12ರಂದು ಕಾರ್ಕಳದ ಪೆರ್ವಾಜೆಯ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
2019 ಜೂನ್ 1ರಂದು ವಿವಾಹ ನೊಂದಾಣೆ ಮಾಡಿಸಿಕೊಂಡಿದ್ದರು. 1 ವರ್ಷದವರೆಗೆ ಅವರಿಬ್ಬ ದಾಂಪತ್ಯ ಜೀವನ ಸಾಂಗವಾಗಿ ಮುನ್ನಡೆಯುತ್ತಿತ್ತು. ಬಳಿಕ ಪತಿ ಸುನಿಲ್, ೫ ಲಕ್ಷ ರೂ ವರದಕ್ಷಿಣೆ ಹಣ ಕೊಡಬೇಕೆಂದು ಒತ್ತಾಯಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದನು.
ಸುನೀಲ್ನ ವರ್ತನೆಯಿಂದ ಬೇಸತ್ತ ಸೌಮ್ಯ ಬಂಗಾರವನ್ನು ಅಡವಿಟ್ಟು ರೂ. 80,000 ಹಣವನ್ನು ನೀಡಿದ್ದರು. 2019 ಜೂನ್ 30ರಂದು 3 ಲಕ್ಷ ರೂ ಖರ್ಚು ಭರಿಸಿ ಮದುವೆ ಆರತಕ್ಷತೆಯನ್ನು ಕಾರ್ಕಳ ಸ್ವಾಗತ್ ಹೊಟೇಲ್ ಸಭಾ ಭವನದಲ್ಲಿ ನೆರವೇರಿಸಲಾಗಿತ್ತೆಂದು ದೂರಿನಲ್ಲಿ ವಿವರಿಸಲಾಗಿದೆ.
ಮದುವೆಯಾದ ಬಳಿಕ ಸೌಮ್ಯ ಅವರು ತನ್ನ ತಾಯಿ ಮನೆಯಲ್ಲಿಯೇ ಇದ್ದು ಸುನೀಲ್ ತನ್ನ ಮನೆಗೆ ಕರೆದುಕೊಂಡು ಹೋಗಿರುವುದಿಲ್ಲ.2021 ನವಂಬರ್ 17ರಂದು ಸುನಿಲ್ ಊರಿಗೆ ಹೋಗಿದ್ದು, ನಂತರದ ದಿನಗಳಲ್ಲಿ ಫೋನ್ ಮಾಡಿರಲಿಲ್ಲ. ಅದೇ ಕಾರಣದಿಂದ ಸೌಮ್ಯ ಅವರು ಫೋನ್ ಮಾಡಿದಾಗ ಫೋನ್ ಮಾಡಬೇಡವೆಂದು ಸುನೀಲ್ ಬೈಯುತ್ತಿದ್ದನು. ಅದರಿಂದ ಮಾನಸಿಕವಾಗಿ ನೊಂದಿದ್ದ ಸೌಮ್ಯ 2022 ಮಾರ್ಚ್ 07ರಂದು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿ ಮಾತ್ರೆ ಸೇವಿಸಿ, ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಕುರಿತು ಆರೋಪಿ ಸುನೀಲ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.