ಉಡುಪಿ, ಜು 21 (DaijiworldNews/SM) ತಮ್ಮನಿಗೆ ತಿಂಡಿ ತರುತ್ತೇನೆ ಎಂದು ತಿಳಿಸಿ ವಿದ್ಯಾರ್ಥಿಯೋರ್ವ ಪೇಟೆಗೆ ಹೋದವನು ವಾಪಾಸು ಮನೆಗೆ ಬರದೆ ಇರುವ ಕಾರಣ ಮನೆಯವರು ಹಾಗೂ ಸಾರ್ವಜನಿಕರು ಹುಡುಕಾಟ ನಡೆಸುತ್ತಿದ್ದಾರೆ.
ಬಿಸಿರೋಡು ಬಸ್ ನಿಲ್ದಾಣ ದ ಹಿಂಬದಿಯ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಗಣೇಶ್ ಎಂಬವರ ಮಗ ದ್ಯಾನ್ (13) ಎಂಬಾತ ಮನೆಯಿಂದ ಹೊರಗೆ ಹೋಗಿದ್ದಾನೆ. ಬಂಟ್ವಾಳ ವಿದ್ಯಾಗಿರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುವ ವಿದ್ಯಾರ್ಥಿ ಯಾಗಿದ್ದಾನೆ. ಈತ ಸಂಜೆ ಶಾಲೆಯಿಂದ ಮನೆಗೆ ಬಂದವನು ಸ್ಕೌಟ್ ಮತ್ತು ಗೈಡ್ಸ್ ನ ಅಂಗಿ ಮತ್ತು ಚಡ್ಡಿ ಹಾಕಿಕೊಂಡು ಮನೆಯಿಂದ ತೆರಳಿದ್ದಾನೆ. ಗಣೇಶ್ ಅವರು ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ವಿನಾಯಕ ಬೇಕರಿ ನಡೆಸುತ್ತಿದ್ದು, ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದವರು ಊಟ ಮುಗಿಸಿ ಮಲಗಿದ್ದರು, ತಾಯಿ ಬೇಕರಿಗೆ ತೆರಳಿದ್ದರು. ದ್ಯಾನ್ ಅವರು ತಮ್ಮನ ಜೊತೆ ಶಾಲೆಯಿಂದ ಮನೆಗೆ ಬಂದವನು ಅಲ್ಲಿಂದ ತಿಂಡಿ ತರುತ್ತೇನೆ ಎಂದು ಸಂಜೆ 5 ಗಂಟೆಗೆ ಮನೆಯಿಂದ ಹೊರಗೆ ಹೋದವನು ರಾತ್ರಿ 8 ಗಂಟೆಯಾಗುತ್ತ ಬಂದರೂ ಮನೆಗೆ ಬಂದಿಲ್ಲ. ಹೀಗಾಗಿ ಮನೆಯವರು ಹಾಗೂ ಪರಿಸರದ ಸಾರ್ವಜನಿಕ ರು ಜೊತೆಯಾಗಿ ಸಿ.ಸಿ.ಕ್ಯಾಮರಾ ದಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.