ಮೂಡುಬಿದಿರೆ, ಜ 23(SM): ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಡೆ ಬಳ್ಳಾಲಬಲು ಪರಿಸರದಲ್ಲಿ ಕೋತಿಮರಿಯೊಂದು ನೀರಿನ ಡ್ರಂನೊಳಗೆ ಬಿದ್ದು ಮೃತಪಟ್ಟಿದೆ.
ಬಳ್ಳಾಲಬಲ್ನ ಕೃಷ್ಣ ಪ್ಪ ಶೆಟ್ಟಿಗಾರ್ ಕಾರಣಾಂತರಗಳಿಂದ ಒಂಟಿಯಾಗಿ ಜೀವಿಸುತ್ತಿದ್ದ, ಸುಮಾರು 10 ದಿನಗಳ ಹಿಂದೆ ನಿಧನ ಹೊಂದಿದ್ದರು. ಅವರ ನಿಧನ ಬಳಿಕ ಯಾರೂ ಮನೆಯಲ್ಲಿ ವಾಸವಿರದ ಕಾರಣ, ನೀರು ತುಂಬಿದ ಡ್ರಂನೊಳಗೆ ಕೋತಿ ಮರಿಯೊಂದು ಬಿದ್ದು ಸತ್ತದ್ದು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.
ಆದರೆ ಶವ ಕೊಳೆತು ದುರ್ವಾಸನೆ ಹಬ್ಬತೊಡಗಿದ ಪರಿಣಾಮವಾಗಿ ಊರಿನವರು ಹುಡುಕಾಡುವಾಗ ಈ ಕೋತಿ ಮರಿಯ ಶವ ಬುಧವಾರ ಗೋಚರಿಸಿದೆ. ಕಲ್ಲಮುಂಡ್ಕೂರು ಗ್ರಾ.ಪಂ. ಪಿಡಿಓ ಉಗ್ಗಪ್ಪ ಮೂಲ್ಯ ಅವರು ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ. ನಸೀಬಾ, ಪಶುವೈದ್ಯಕೀಯ ವೈದ್ಯ ಡಾ.ಮಹೇಶ್, ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಮೊಹಮ್ಮದ್ ತನ್ವೀರ್ ಹಾಮದ್ ಜತೆಗೆ ಸ್ಥಳಕ್ಕೆ ಆಗಮಿಸಿದರು.
ಅರಣ್ಯ ಇಲಾಖಾ ಅಧಿಕಾರಿ ಕೆ.ಸಿ. ಮ್ಯಾಥ್ಯೂ, ತಾಲೂಕು ಆರೋಗ್ಯಾಧಿಕಾರಿ ನವೀನ್ ಕುಲಾಲ್, ಕಲ್ಲಮುಂಡ್ಕೂರು ಗ್ರಾ. ಪಂ. ವಾರ್ಡ್ ಸದಸ್ಯ ಲಾಝರಸ್ ಡಿಕೋಸ್ತ ಅವರ ಉಪಸ್ಥಿತಿಯಲ್ಲಿ ಶವ ಮಹಜರು ನಡೆಯಿತು. ಈಗಾಗಲೇ ಕೊಳೆತು ಜೀರ್ಣವಾಗಿದ್ದ ಕಾರಣ ಶವವನ್ನು ಎಲ್ಲ ಮುಂಜಾಗರೂಕತಾ ಕ್ರಮಗಳೊಂದಿಗೆ ಸುಟ್ಟುಹಾಕಲಾಯಿತು.
ಈ ಭಾಗದಲ್ಲಿ ಮಂಗನ ಖಾಯಿಲೆ ಕಾಣಿಸಿಕೊಂಡ ಲಕ್ಷಣಗಳಿಲ್ಲ ಎಂದು ಆರೋಗ್ಯ ಇಲಾಖಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.