ಬಂಟ್ವಾಳ, ಜು 20 (DaijiworldNews/SM): ತಾಲೂಕಿನಾದ್ಯಂತ ಮಳೆಯ ಅಬ್ಬರ ಕಡಿಮೆಯಾಗಿದ್ದರೂ, ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದ್ದು, ಆತಂಕ ಮೂಡಿಸಿದೆ.
ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಹಲವೆಡೆ ಗುಡ್ಡ ಕುಸಿತದ ಘಟನೆಗಳು ನಡೆದಿದ್ದು, ಬಂಟ್ವಾಳದ ಹಳೇಗೇಟು ಸಮೀಪ ಕೆಳಗಿನ ವಗ್ಗದ ಬಳಿ ಗುಡ್ಡವೊಂದು ಪದೇ ಪದೇ ಕುಸಿಯುತ್ತಿದ್ದು, ಆಗಾಗ್ಗೆ ರಸ್ತೆಗೆ ಬಂಡೆ ಮತ್ತು ಮರಗಳು ಬಿದ್ದು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಸೋಮವಾರವೂ ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಬಿದ್ದ ಮಣ್ಣು ಹಾಗೂಕಲ್ಲುಗಳನ್ನು ಜೆಸಿಬಿ ಮೂಲಕ ತೆರವು ಗೊಳಿಸಲಾಗುತ್ತಿದ್ದರೂ, ಮಣ್ಣು ಪದೇ ಪದೇ ಕುಸಿಯುತ್ತಿರುವುದು ಆತಂಕ ಸೃಷ್ಟಿಸಿದೆ. ಪ್ರಸ್ತುತ ಬ್ಯಾರಿಕೇಡ್ ಹಾಕಿ ಅರ್ಧ ರಸ್ತೆಯಲ್ಲಿ ಸಂಚಾರ ಮಾಡಲು ಅನುವುಮಾಡಿಕೊಡಲಾಗಿದೆ.
ಶಿರಾಡಿ ಘಾಟ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಸಂಪರ್ಕದ ಈ ರಸ್ತೆಯಲ್ಲಿಯೇ ಬಹುತೇಕ ವಾಹನಗಳು ಸಂಚರಿಸುತ್ತಿದ್ದು,ಇನ್ನು ಕೂಡ ಗುಡ್ಡಕುಸಿತದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಆತಂಕದ ಸ್ಥಿತಿ ಉಂಟಾಗಿದೆ.