ಉಡುಪಿ, ಜ 23(SM): ಸುಂಕ ವಸೂಲಾತಿಯನ್ನು ವಿರೋಧಿಸಿ ಧರಣಿ ನಡೆಸುತ್ತಿರುವ ಕರವೇ ಸಂಘಟನೆಯ ನಡುವೆ ಸಂದಾನ ನಡೆಸಲು ಬುಧವಾರ ಜಿಲ್ಲಾಡಳಿತ ಪ್ರಯತ್ನ ನಡೆಸಿದೆ. ಜಿಲ್ಲಾಧಿಕಾರಿಗಳು ಕರೆದ ಸಭೆಯಲ್ಲಿ ಕರವೇ ಸಂಘಟನೆಯ ಜಿಲ್ಲಾದ್ಯಕ್ಷ ಅನ್ಸರ್ ಸೇರಿದಂತೆ ಪ್ರಮುಖರು ಭಾಗವಹಿಸಿ ಸುಂಕ ವಸೂಲಾತಿಯ ಬಗ್ಗೆ ಗಂಭೀರ ಚರ್ಚೆ ನಡೆಸುವ ಸಿದ್ದತೆ ನಡೆಸಿದ್ದರು.
ಆದರೆ ಜಿಲ್ಲಾಧಿಕಾರಿಗಳು ಕರೆದ ಸಭೆಗೆ ನವ ಯುಗ್ ಕಂಪನಿಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇದು ಕರವೇ ಸಂಘಟನೆಯ ಆಕ್ರೋಶಕ್ಕೆ ಕಾರಣವಾಯಿತು. ಸಭೆಯನ್ನು ಜಿಲ್ಲಾಡಳಿತ ಕಾಟಚಾರಕ್ಕೆ ನಡೆಸಿ ಹೋರಾಟಗಾರರಿಗೆ ಅವಮಾನ ಮಾಡಿದೆ ಎಂದು ಅಪರ ಜಿಲ್ಲಾಧಿಕಾರಿಗಳ ವಿರುದ್ದ ಕರವೇ ಸಂಘಟನೆ ಸೇರಿದಂತೆ ಸುಂಕ ವಸೂಲಾತಿಯ ವಿರುದ್ದ ಹೋರಾಟ ನಡೆಸುತ್ತಿರುವ ಬಹುತೇಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿತು.
ಅಪರ ಜಿಲ್ಲಾಧಿಕಾರಿ ಹಾಗೂ ಹೋರಾಟಗಾರರ ನಡುವೆ ಈ ಸಂದರ್ಭ ಮಾತಿನ ಚಕಮಕಿ ನಡೆಯಿತು. ನವಯುಗ್ ಕಂಪನಿ ಹಾಗೂ ಹೋರಾಟಗಾರರ ನಡುವೆ ಜಿಲ್ಲಾಡಳಿತ ನಡೆಸಿದ ಸಂಧಾನ ಬಹುತೇಕ ನವ ಯುಗ್ ಕಂಪನಿಯ ಅಧಿಕಾರಿಗಳ ಗೈರು ಹಾಜರಿಯಿಂದ ವಿಫಲವಾಯಿತು.