ಮಂಗಳೂರು, ಜು 20 (DaijiworldNews/HR): ವೆಲೆನ್ಸಿಯಾ ಜಂಕ್ಷನ್ನಲ್ಲಿರುವ ಕೋಳಿ ಅಂಗಡಿಯೊಂದರ ಸಿಬ್ಬಂದಿಯ ಮೇಲೆ ಇತ್ತಿಚೇಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ಪೊಲೀಸರು ದಾಖಲಿಸಿದ್ದಾರೆ.
ಆರೋಪಿಗಳಾದ ಜಲ್ಲಿಗುಡ್ಡೆ ಬಜಾಲ್ನ ನಿವಾಸಿ ಪ್ರೀತಂ ಪೂಜಾರಿ (26), ಯೆಕ್ಕೂರಿನ ನಿವಾಸಿ ಧೀರು ಯಾನೆ ಧೀರಜ್ ಕುಮಾರ್ (27) ಕೊಲೆ ಯತ್ನ, ಅಪಹರಣ, ಕ್ರಿಮಿನಲ್ ಸಂಚು, ಕಳ್ಳಭಟ್ಟಿ ಸಾರಾಯಿ ವ್ಯವಹಾರ, ಗಾಂಜಾ ಸೇವನೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಇನ್ನು ಆರೋಪಿಗಳಾದ ಪ್ರೀತಂ ಪೂಜಾರಿ ಹಾಗೂ ಧೀರಜ್ ಕುಮಾರ್ ಸಮಾಜಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅವರ ಮೇಲೆ ಗೂಂಡಾ ಕಾಯಿದೆಯನ್ನು ದಾಖಲಿಸಲಾಗಿದೆ ಎಂದು ಕಂಕನಾಡಿ ಪೊಲೀಸರು ತಿಳಿಸಿದ್ದಾರೆ.
ಎಪ್ರಿಲ್ 10ರಂದು ಆರೋಪಿಗಳಾದ ಪ್ರೀತಂ ಪೂಜಾರಿ ಹಾಗೂ ಧೀರಜ್ ಕುಮಾರ್ ವೆಲೆನ್ಸಿಯಾ ಜಂಕ್ಷನ್ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಇದನ್ನು ಪ್ರಶ್ನಿಸಿದ ಸಮೀಪದ ಕೋಳಿ ಅಂಗಡಿಯ ಸಿಬ್ಬಂದಿಗಳಿಬ್ಬರಿಗೆ ಚೂರಿ ಹಿಡಿದು ಬೆದರಿಸಿ, ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿದ್ದು, ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿ ತಪಾಸಣೆಗೆ ಒಳಪಡಿಸಿದ ವೇಳೆ ಆರೋಪಿಗಳು ಗಾಂಜಾ ಸೇವನೆ ಮಾಡಿದ್ದಾರೆ ಎನ್ನುವುದು ಕೂಡ ದೃಢಪಟ್ಟಿತ್ತು.