ಮಂಗಳೂರು, ಜು 19 (DaijiworldNews/SM): ವಿದೇಶದಿಂದ ಮರಳಿದ ಕೇರಳ ಮೂಲದ ಇಬ್ಬರು ಪ್ರಯಾಣಿಕರಲ್ಲಿ ಮಂಕಿ ಪಾಕ್ಸ್ ದೃಢ ಪಟ್ಟ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕೈಗೊಂಡಿದೆ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಮಂಕಿಪಾಕ್ಸ್ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗತಾ ಕ್ರಮಗಳ ಬಗ್ಗೆ ವಿಮಾನ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.
ಹೆಚ್ಚಿನ ಕೇರಳ ಪ್ರಯಾಣಿಕರು ಮಂಗಳೂರಿನ ವಿಮಾನ ನಿಲ್ದಾಣದಿಂದ ಕೇರಳಕ್ಕೆ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಈ ವೇಳೆ ರೋಗ ಲಕ್ಷಣಗಳಿದ್ದರೆ, ಮಂಗಳೂರಿನ ವಿಮಾನ ನಿಲ್ದಾಣದ ಸಿಬ್ಬಂದಿಗಳಿಗೆ ಮಂಕಿ ಫಾಕ್ಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಮಾನ ಸಿಬ್ಬಂದಿಗಳು ವಿಮಾನ ಲ್ಯಾಂಡಿಂಗ್ ಆಗುವ ಮೊದಲೇ ವಿಮಾನದಲ್ಲಿ ಜ್ವರ ಹಾಗೂ ಚರ್ಮದ ಗುಳ್ಳೆಗಳು ಬರುವರನ್ನು ಪತ್ತೆ ಹಚ್ಚಬೇಕು. ಆ ಲಕ್ಷಣಗಳುಳ್ಳವರು ಕಂಡು ಬಂದರೆ ಅವರನ್ನು ಪ್ರತ್ಯೇಕಿಸಬೇಕು ಹಾಗೂ ವಿಮಾನ ನಿಲ್ದಾಣದಲ್ಲಿರುವ ಆರೋಗ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಬೇಕು. ಬಳಿಕ ವಿಮಾನ ನಿಲ್ದಾಣದಿಂದ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಐಸೋಲೇಷನ್ ಗೆ ದಾಖಲಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮಂಕಿ ಫಾಕ್ಸ್ ಹರಡದಂತೆ ಜಾಗೃತಿ ಮೂಡಿಸುವ ಕನ್ನಡ, ಮಲಯಾಳಂ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಐ.ಇ.ಸಿ ಸ್ಟ್ಯಾಂಡಿಗಳನ್ನು ಸಿದ್ದಪಡಿಸಲು ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಾಹಿತಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ವಿಮಾನ ನಿಲ್ದಾಣದ ಅಧಿಕಾರಿಗಳು, ಸ್ಟ್ಯಾಂಡಿಗಳನ್ನು ತಯಾರಿಸಿ ವಿವಿಧ ಸ್ಥಳಗಳಲ್ಲಿ ಪ್ರರ್ದಶಿಸುವಂತೆ ಸೂಚಿಸಿದರು.
ಮಂಕಿಪಾಕ್ಸ್ ಜಾಗೃತಿ ಮೂಡಿಸುವ ವಿವಿಧ ಫೋಟೋಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಾಟ್ಸ್ ಗ್ರೂಪ್ನಲ್ಲಿ ಶೇರ್ ಮಾಡಲು ವಿಮಾನ ನಿಲ್ದಾಣ ಆರೋಗ್ಯಾಧಿಕಾರಿ ಹಾಗೂ ಏರ್ಲೈನ್ಸ್ ಅಧಿಕಾರಿಯವರಿಗೆ ನಿರ್ದೇಶನ ನೀಡಿದರು.