ಉಡುಪಿ, ಜು 18 (DaijiworldNews/SM): ಉಡುಪಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ, ಉದ್ಯಾವರ, ಕಟಪಾಡಿ, ಪಾಂಗಳ, ಕಾಪು, ಮೂಳೂರು, ಉಚ್ಚಿಲ, ಪಡುಬಿದ್ರಿ, ಹೆಜಮಾಡಿ ಮೂಲಕವಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಈ ಹೆದ್ದಾರಿ ಇದೀಗ ವಾಹನ ಸವಾರರಿಗೆ ಮರಣ ಕಟಂಕವಾಗಿ ಪರಿಣಮಿಸಿದೆ.
ಈ ಸಂಪೂರ್ಣ ಹೆದ್ದಾರಿಯು ಹಲವಾರು ಅವ್ಯವಸ್ಥೆಗಳಿಂದ ಕೂಡಿದ್ದು ಹೊಂಡ ಗುಂಡಿಗಳು ಚಾಲಕರಿಗೆ ಚಾಲೆಂಜ್ ನೀಡುತ್ತಿವೆ. ಉಡುಪಿಯ ಕರಾವಳಿ ಬೈಪಾಸ್ ನಿಂದ ಪ್ರಾರಂಭಿಸಿ ಉದ್ಯಾವರದ ಬಲಾಯಿಪಾದೆ, ಕಿನ್ನಿಮುಲ್ಕಿ, ಕಟಪಾಡಿ ಜಂಕ್ಷನ್, ಈ ಮುಂತಾದ ಭಾಗಗಳಲ್ಲಿ ಬೃಹತ್ ಆದ ಹೊಂಡಗಳು ಬಿದ್ದಿದ್ದು ವೇಗವಾಗಿ ಬರುವ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿವೆ.
ಹೆಜಮಾಡಿ, ಸಾಸ್ತಾನ, ಸುರತ್ಕಲ್ ಎಂಬಂತೆ ಮೂರು ಕಡೆ ಈ ರಸ್ತೆಗೆ ಟೋಲ್ ಸಂಗ್ರಹ ಮಾಡಲಾಗುತ್ತಿದ್ದು, ಒಪ್ಪಂದದ ಪ್ರಕಾರ ಟೋಲ್ ಸಂಗ್ರಹದಿಂದ ಬಂದ ಹಣದಲ್ಲಿ ರಸ್ತೆಯನ್ನು ನಿರ್ವಹಣೆ ಮಾಡಬೇಕಾಗಿರುವುದು ಕಂಟ್ರಾಕ್ಟರ್ ಕಂಪನಿಯ ಜವಾಬ್ದಾರಿ. 2010 ರಲ್ಲಿ ಈ ಹೆದ್ದಾರಿ ಕಾಮಗಾರಿಯ ಕುರಿತಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನವಯುಗ ಟೋಲ್ ಕಂಪನಿಯ ನಡುವೆ ನಡೆದ ಒಪ್ಪಂದದ ಪ್ರಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಕಂಡು ಬಂದ 48 ಗಂಟೆಗಳ ಒಳಗಾಗಿ ಅವುಗಳನ್ನು ರಿಪೇರಿ ಮಾಡುವುದು ಕಂಪನಿಯ ಜವಾಬ್ದಾರಿ. ಆದರೆ ಇದ್ಯಾವುದನ್ನೂ ಮಾಡದೇ ನವಯುಗ ಟೋಲ್ ಕಂಪನಿ ನಿರ್ಲ್ಯಕ್ಷ್ಯ ವಹಿಸುತ್ತಿರುವುದು ಇದೀಗ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಕೆಲವೊಂದು ಕಡೆಗಳಲ್ಲಿ ಸುಮಾರು 2 ಅಡಿ ಆಳದಷ್ಟು ಗುಂಡಿಗಳಿದ್ದು ಮಳೆ ಬಂದ ಸಂದರ್ಭದಲ್ಲಿ ಇವುಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಮತ್ತುಷ್ಟು ಅಪಾಯಕ್ಕೆ ಆಹ್ವಾನವನ್ನು ನೀಡುತ್ತಿದೆ. ವಾರದ ಹಿಂದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ 10 ದಿನಗಳ ಒಳಗೆ ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ಸರಿ ಮಾಡಲು ಆದೇಶಿಸಲಾಗಿತ್ತು. ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ನವಯುಗ ಕಂಪನಿ ಜನರ ಜೀವದ ಜೊತೆಗೆ ಚೆಲ್ಲಾಟ ವಾಡುತ್ತಿದೆ. ಕೆಲವೇ ದಿನಗಳ ಹಿಂದೆ ಉಡುಪಿಯ ಕರಾವಳಿ ಬೈಪಾಸ್ ಬಳಿ ವೇಗವಾಗಿ ಬರುತಿದ್ದ ಕಾರೊಂದು ಹೆದ್ದಾರಿಯಲ್ಲಿ ಇದ್ದ ನೀರಿನ ಸೆಳೆತಕ್ಕೆ ಸಿಲುಕಿ ಡಿವೈಡರ್ ದಾಟಿ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತಿದ್ದ ಬೈಕ್ ಸವಾರರ ಮೇಲೆ ಬಿದ್ದಿತ್ತು. ಈ ಘಟನೆಯಲ್ಲಿ ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಸವಾರನ ಕಾಲಿಗೆ ತೀವ್ರತರದ ಗಾಯಗಳಾಗಿದ್ದವು, ಡಿವೈಡರ್ ಬಳಿಯೇ ಮಳೆಯಿಂದಾಗಿ ನೀರು ಸಂಗ್ರಹವಾಗುತಿದ್ದು ಇದರಿಂದಾಗಿ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪುವ ಸಂಧರ್ಭ ಕೂಡಾ ಆಗ್ಗಾಗೆ ನಡೆಯುತ್ತಿರುತ್ತವೆ.
ಒಟ್ಟಿನಲ್ಲಿ ಬಿಸಿ ಆಗದೇ ಬೆಣ್ಣೆ ಕರಗದು ಎಂಬಂತೆ ಕೆಲವೊಂದು ಕಡೆಗಳಲ್ಲಿ ಇದೀಗ ನವಯುಗ ಕಂಪನಿ ತೇಪೆ ಕಾಮಗಾರಿ ಆರಂಭಿಸಿದ್ದರೂ ಕೂಡಾ ಒಂದೇ ಮಳೆಗೆ ಡಾಮಾರು ಕಿತ್ತು ಹೋಗಿ ಮತ್ತೆ ಹೊಂಡ ಬೀಳುತ್ತಲಿದೆ. ಜನರಿಗೆ ಸುಖಕರ ಪ್ರಯಾಣವನ್ನು ಒದಗಿಸಬೇಕು ಎಂಬ ನಿಟ್ಟಿನಲ್ಲಿ ನಿರ್ಮಾಣವಾದ ಈ ರಾಷ್ಟ್ರೀಯ ಹೆದ್ದಾರಿ ಜನರ ಜೀವಕ್ಕೆ ಅಪಾಯವನ್ನು ಉಂಟು ಮಾಡುತ್ತಿರುವುದು ವಿಪರ್ಯಾಸವೇ ಸರಿ. ಅಧಿಕಾರಿ, ಜನಪ್ರತಿನಿಧಿಗಳು ಪ್ರಾಣ ಬಲಿಗೆ ಕಾಯದೇ ಸೂಕ್ತ ಸಮಯದಲ್ಲಿ ಈ ಕುರಿತಾಗಿ ಗಮನ ಹರಿಸಿ ಮಳೆಗಾಲ ಪ್ರಾರಂಭವಾಗುವ ಮುನ್ನವೇ ರಸ್ತೆಯನ್ನು ಸುಸ್ಥಿತಿಗೆ ತಂದು ವಾಹನ ಸವಾರರ ಆಶೀರ್ವಾದಕ್ಕೆ ಪಾತ್ರವಾಗಬೇಕಾಗಿದೆ.