ಬೆಂಗಳೂರು,ಜ 23(MSP): ಲಿಂಗಕೈರಾದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಆಗಮಿಸದ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ತಮ್ಮ ಅಸಮಧಾನ ವ್ಯಕ್ತಪಡಿಸಿರುವ ಜಿ.ಪರಮೇಶ್ವರ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಲೆಬ್ರಿಟಿಗಳ ವಿವಾಹ ಸಮಾರಂಭಕ್ಕೆ ಹಾಜರಾಗಲು, ಚಿತ್ರರಂಗದ ನಟರನ್ನ ಭೇಟಿಯಾಗಲು ಬೇಕಾದಷ್ಟು ಕಾಲಾವಕಾಶ ಇದೆ. ಆದ್ರೆ, ನಮ್ಮ ನಡೆದಾಡುವ ದೇವರ ದರ್ಶನಕ್ಕೆ ಬರಲು ಅವರ ಬಳಿ ಸಮಯವಿಲ್ಲ ಎಂದು ಆಕ್ರೋಶಭರಿತ ಮಾತುಗಳನ್ನು ಆಡಿದ್ದಾರೆ.
ಸಿದ್ದಗಂಗಾ ಶ್ರೀಗಳು ದೇಶದ ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಪಟ್ಟಿದ್ದಾರೆ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ’ಭಾರತ ರತ್ನ ’ನೀಡಿ ಗೌರವಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಅವರ ಬರಹದ ಕೊನೆಯ ಸಾಲಿನಲ್ಲಿ ಪ್ರಧಾನಿ ಮೋದಿಗೆ 'ಫಿಲಿಪ್ ಕೋಟ್ಲರ್ ಪ್ರಶಸ್ತಿಗೆ ನೀವು ನಿಜವಾದ ಅರ್ಹತೆ ಪಡೆದಿದ್ದೀರಿ' ಎಂದು ಬರೆದುಕೊಂಡಿದ್ದಾರೆ.