ಉಪ್ಪಿನಂಗಡಿ, ಜು 17 (DaijiworldNews/DB): ಸಕಲೇಶಪುರದ ದೋಣಿಗಲ್ ಬಳಿ ಭೂಕುಸಿತಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬೆಂಗಳೂರಿನತ್ತ ತೆರಳುವ ವಾಹನಗಳಿಗೆ ಗುಂಡ್ಯದಲ್ಲಿ ಸಂಚಾರಕ್ಕೆ ಅವಕಾಶ ನೀಡದೆ ಹಾಸನ ಕಡೆಯಿಂದ ಗುಂಡ್ಯದತ್ತ ತೆರಳುವ ವಾಹನಗಳಿಗೆ ಅವಕಾಶ ಕಲ್ಪಿಸಿದಕ್ಕಾಗಿ ಪೊಲೀಸರು ಮತ್ತು ಚಾಲಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಶನಿವಾರ ನಡೆದಿದೆ.
ದೋಣಿಗಲ್ ಬಳಿ ಭೂ ಕುಸಿತವುಂಟಾದ ಪರಿಣಾಮ ಶಿರಾಡಿ ಘಾಟ್ ಬಳಿ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಸನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದರಿಂದ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳು ಶನಿವಾರ ದಿನವಿಡೀ ಗುಂಡ್ಯದಲ್ಲಿ ಸಾಲುಗಟ್ಟಿ ಹೆದ್ದಾರಿ ಬದಿ ನಿಂತಿದ್ದವು. ಆದರೆ ಹಾಸನ ಕಡೆಯಿಂದ ವಾಹನಗಳು ಗುಂಡ್ಯದತ್ತ ಆಗಮಿಸುತ್ತಿದ್ದವು. ಇದರಿಂದ ಕೆರಳಿದ ಮಂಗಳೂರು-ಬೆಂಗಳೂರು ನಡುವೆ ಸಂಚರಿಸಬೇಕಿದ್ದ ಚಾಲಕರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ನಮಗೂ ಸಂಚರಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದ ಘಟನೆ ನಡೆಯಿತು.
ಈ ವೇಳೆ ಪೊಲೀಸರು ನಮಗೆ ಘಾಟಿ ರಸ್ತೆಯಲ್ಲಿ ವಾಹನ ಮುಂದೆ ಸಂಚರಿಸಲು ಬಿಡಬಾರದೆಂಬ ಆದೇಶವಿದೆಯೇ ಹೊರತು ಅಲ್ಲಿಂದ ಬಂದವುಗಳನ್ನು ತಡೆಯಲು ಅಲ್ಲ. ಹೀಗಾಗಿ ಹಾಸನ ಕಡೆಯಿಂದ ಬರುವ ವಾಹನಗಳನ್ನು ತಡೆಯಲು ಅವಕಾಶವಿಲ್ಲ ಎಂದು ವಾಗ್ವಾದಕ್ಕಿಳಿದ ಚಾಲಕರನ್ನು ಚದುರಿಸಿದರು.