ಮಂಗಳೂರು, ಜ 22(SM): ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ನೀಡುವ ಸಂದೇಶ ಪ್ರಶಸ್ತಿಯನ್ನು 7 ಮಂದಿ ಸಾಧಕರಿಗೆ ಪ್ರದಾನ ಮಾಡಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ವಿದ್ವಾಂಸ ಪ್ರಸನ್ನ ಹೆಗ್ಗೊಡು, ಧರ್ಮ ಹಾಗೂ ಕಲೆಗಳ ಮಧ್ಯೆ ಒಂದು ರೀತಿಯಾದ ಸಂಬಂಧವಿದೆ. ಎರಡೂ ಕ್ಷೇತ್ರಗಳು ಸಾಮಾಜಿಕವಾಗಿ ಮಹತ್ವದ ಬದಲಾವಣೆ ಹಾಗೂ ಜವಾಬ್ದಾರಿಯನ್ನುಂಟು ಮಾಡಬಲ್ಲ ಕ್ಷೇತ್ರಗಳಾಗಿವೆ. ಕಲೆ ಹಾಗೂ ಧರ್ಮದ ನಡುವಿನ ಸಂಬಂಧವನ್ನು ಇತ್ತೀಚಿನ ದಿನಗಳಲ್ಲಿ ತಪ್ಪಾಗಿ ಗ್ರಹಿಸಲಾಗುತ್ತಿದೆ. ಇದು ವಿಷಾದಕರ ಸಂಗತಿ ಎಂದು ಪ್ರಸನ್ನ ಹೆಗ್ಗೊಡು ತಿಳಿಸಿದ್ದಾರೆ.
ಇನ್ನು ಸಮಾರಂಭದಲ್ಲಿ ಬಳ್ಳಾರಿ ಧರ್ಮಪ್ರಾಂತದ ಧರ್ಮಾಧ್ಯಕ್ಷರು ಹಾಗೂ ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಅ.ವಂ.ಹೆನ್ರಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಾ.ಡಿಸೋಜ ಪ್ರಸ್ತಾವಿಕ ಮಾತುಗಳಾನ್ನಾಡಿದರು.
ಸಂದೇಶ ಪ್ರತಿಷ್ಠಾನದ ವಿಶ್ವಸ್ತರಾದ ರೊಯ್ ಕ್ಯಾಸ್ಟಲಿನೋ, ಕಾನ್ಸೆಪ್ಟಾ ಆಳ್ವ, ಚಂದ್ರಕಲಾ ನಂದಾವರ ಮತ್ತಿತರರು ಉಪಸ್ಥಿತರಿದ್ದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ.ನೆಲ್ಸನ್ ಪ್ರಕಾಶ್ ಸ್ವಾಗತಿಸಿದರು.
ಪ್ರಶಸ್ತಿ ವಿಜೇತರು:
ಪ್ರಸನ್ನ ಹೆಗ್ಗೊಡು- ಸಂದೇಶ ಸಾಹಿತ್ಯ ಪ್ರಶಸ್ತಿ
ಮಂಜಮ್ಮ ಜೋಗತಿ- ಸಂದೇಶ ಕಲಾ ಪ್ರಶಸ್ತಿ
ಬಿ.ಎಂ.ಹನೀಫ್ - ಸಂದೇಶ ಮಾಧ್ಯಮ ಪ್ರಶಸ್ತಿ
ಬಿ.ಎಂ.ರೋಹಿಣಿ- ಸಂದೇಶ ಶಿಕ್ಷಣ ಪ್ರಶಸ್ತಿ
ವಂ.ಬೆನ್ ಬ್ರಿಟ್ಟೊ ಪ್ರಭು -ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ
ವಂ.ಟೆಜಿ ಥೋಮಸ್ ನಿರ್ದೇಶಕರು ಸ್ನೇಹಸದನ್ ಹಾಗೂ ಭ.ಜಾನ್ಸಿ ನಿರ್ದೇಶಕರು ಜೀವದಾನ್ ಸಂಸ್ಥೆ- ಸಂದೇಶ ವಿಶೇಷ ಪ್ರಶಸ್ತಿ