ಬಂಟ್ವಾಳ, ಜು 16 (DaijiworldNews/HR): ಕ್ಷುಲಕ ಕಾರಣಕ್ಕಾಗಿ ದ್ವಿಚಕ್ರ ವಾಹನ ಸವಾರನೋರರ್ವ ಸರಕಾರಿ ವಾಹನವೊಂದರ ಮಿರರ್ ಪುಡಿ ಮಾಡಿದ್ದಲ್ಲದೆ ಕಾರಿನಲ್ಲಿದ್ದ ಸರಕಾರಿ ಅಧಿಕಾರಿಗಳಿಗೆ ಹಲ್ಲೆಗೆ ಮುಂದಾಗಿ ಅವ್ಯಾಚ್ಚ ಶಬ್ದಗಳಿಂದ ಬೈದಿರುವ ಘಟನೆ ಇಂದು ಬೆಳಿಗ್ಗೆ ತುಂಬೆ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರು ಜಿ.ಪಂ.ಕಚೇರಿಯ ವಾಹನವೊಂದರ ಚಾಲಕ ದೇವದಾಸ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪುತ್ತೂರಿನಲ್ಲಿ ನಡೆಯುವ ಅಗತ್ಯ ಮೀಟಿಂಗ್ ನಲ್ಲಿ ಭಾಗವಹಿಸಲು ಮೂವರು ಅಧಿಕಾರಿಗಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ವೇಳೆ ತುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಎದುರಿನ ವಾಹನ ವೊಂದು ಬ್ರೇಕ್ ಹಾಕಿದ್ದಾರೆ ಎಂಬ ಕಾರಣಕ್ಕೆ ಜಿ.ಪಂ.ಇಲಾಖೆಯ ವಾಹನ ಚಾಲಕ ಜಗದೀಶ್ ಅವರು ಕೂಡ ಬ್ರೇಕ್ ಹಾಕಿದ್ದಾರೆ. ವೇಗವಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವಕ ಕಾರಿನ ಹಿಂಬದಿಯಲ್ಲಿದ್ದು ಆತ ಕೂಡ ಬ್ರೇಕ್ ಹಾಕಿದಾಗ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರಸ್ತೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ.
ಈ ಕಾರಣಕ್ಕಾಗಿ ಆತ ಕಾರಿಗೆ ದ್ವಿಚಕ್ರವಾಹನವನ್ನು ಅಡ್ಡ ಇಟ್ಟು ತಡೆಒಡ್ಡಿ ಬಳಿಕ ಕಾರಿನ ಮಿರರ್ ಅನ್ನು ಪುಡಿ ಮಾಡಿ ಆ ಬಳಿಕ ಚಾಲಕ ಸಹಿತ ಕಾರಿನಲ್ಲಿದ್ದ ಅಧಿಕಾರಿಗಳಿಗೆ ಅವ್ಯಾಚ್ಚ ಶಬ್ದಗಳಿಂದ ಬೈದಿರುವ ಘಟನೆ ನಡೆದಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.