ಮಂಗಳೂರು,ಜ 22(MSP): ಕರಾವಳಿಯಲ್ಲಿ ಒಂದು ದಶಕ ಕಳೆದು ತುಳುನಾಡಿನ ಮಣ್ಣಿನ ಸಂಸ್ಕೃತಿಯನ್ನು ಅಧ್ಯಯನ ಮಾಡಿ, ಅದಕ್ಕೆ ಕೃತಿ ರೂಪ ನೀಡಿದ ’ಬಿಬಿಸಿ ’ ನಿವೃತ್ತ ಡಾಕ್ಯುಮೆಂಟರಿ ನಿರ್ಮಾಪಕ , ಇಂಗ್ಲೆಂಡ್ ಪ್ರಜೆ ಆಡಮ್ ಕ್ಕಾಫಮ್ (78) ಅವರ ’ ಎ ವಿಲೇಜ್ ಇನ್ ಸೌತ್ ಇಂಡಿಯಾ’ ಪುಸ್ತಕವು ಜನವರಿ 29 ರಂದು ಲಂಡನ್ ನಲ್ಲಿ ಬಿಡುಗಡೆಯಾಗಲಿದೆ.
ಈ ಬಗ್ಗೆ ನಗರದಲ್ಲಿ ಜ.22 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಆಡಮ್ ಕ್ಕಾಫಮ್, ತುಳುನಾಡಿನಲ್ಲಿ ಸುಮಾರು 10 ವರ್ಷಗಳ ಕಾಲ ನೆಲೆ ನಿಂತು ಇಲ್ಲಿನ ಶ್ರೀಮಂತ ಕಲೆ ಯಕ್ಷಗಾನ, ಕಂಬಳ, ಕೋಳಿ ಅಂಕ, ಜಾನಪದ ಹಾಡು, ಭೂತಾರಾಧನೆ ಹಾಗೂ ಇನ್ನಿತರ ತುಳುನಾಡಿನ ಸಂಸ್ಕೃತಿ ಬಗ್ಗೆ ಅಧ್ಯಯನ ನಡೆಸಿದ್ದೇನೆ. 2002 ರಲ್ಲಿ ಕರಾವಳಿಗೆ ಭೇಟಿ ನೀಡಿದ ನಾನು, ಸುರತ್ಕಲ್ ಬಳಿಯ ಹೊಸಬೆಟ್ಟು ಬಳಿ ನೆಲೆಸಿದ್ದೆ. ನಂತರ 2011 ರಲ್ಲಿ ಹೆಚ್ಚಿನ ಅಧ್ಯಯನದ ದೃಷ್ಟಿಯಿಂದ ನಾನು ಕಟಪಾಡಿಯ ಉದ್ಯಾವರದ ನದಿಯ ಗುತ್ತಿನ ಮನೆಯಲ್ಲಿ ನೆಲೆಸಿದ್ದೆ ಎಂದು ಮಾಹಿತಿ ನೀಡಿದರು.
ಮೊದಲಿನಿಂದಲೂ ಭಾರತ ದೇಶದ ಬಗ್ಗೆ ವಿಶೇಷ ಆಸಕ್ತಿ ಇದ್ದು ಕರಾವಳಿ ಪ್ರದೇಶವಾದ ಕೊಚ್ಚಿ ಅಥವಾ ಮಂಗಳೂರಿನ ಕಲೆ ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಬೇಕು ಎನ್ನುವ ಇಚ್ಚೆ ನನಗಿತ್ತು. ಆಯ್ಕೆಯ ಗೊಂದಲದಲ್ಲಿದ್ದ ನನಗೆ ಅಂತಿಮವಾಗಿ ಕರ್ನಾಟಕದ ಕರಾವಳಿ ಪ್ರದೇಶದ ಸಂಸ್ಕೃತಿಯೇ ಶ್ರೀಮಂತವಾಗಿ ಕಾಣಿಸಿ ಅಧ್ಯಯನಕ್ಕಾಗಿ ಇದೇ ಕ್ಷೇತ್ರವನ್ನು ಆರಿಸಿಕೊಂಡೆ. ಈ ನೆಲದ ಸಂಸ್ಕೃತಿ ಸಂಪ್ರದಾಯ, ಕಂಬಳ, ಕೋಳಿ ಅಂಕ, ದಸರಾ, ನವರಾತ್ರಿ ಉತ್ಸವ, ಯಕ್ಷಗಾನ, ವಿವಾಹ ಸಮಾರಂಭ ಅಧ್ಯಯನ ಮಾಡಿ ಬರೆದ ಕೃತಿಯೇ ’ ಎ ವಿಲೇಜ್ ಇನ್ ಸೌತ್ ಇಂಡಿಯಾ’. ಈ ಕೃತಿ ಜನವರಿ 29 ರಂದು ಲಂಡನ್ ನಲ್ಲಿ ಫಾಯ್ ಲೆಸ್ ಬುಕ್ ಶಾಪ್ ನಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
ಪುಸ್ತಕಗಳ ರಚನೆಗಾಗಿಯೇ ಬಿಬಿಸಿ ಯಿಂದ ನಿವೃತ್ತನಾದ ಆಡಮ್ ಕ್ಕಾಫಮ್ ಈವರೆಗೆ ನಾಲ್ಕು ಪುಸ್ತಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ’ಎ ವಿಲೇಜ್ ಇನ್ ಸೌತ್ ಇಂಡಿಯಾ’ ಮತ್ತು ’ಬಿವೇರ್ ಫಾಲಿಂಗ್ ಕೊಕನಟ್ ’ ಎನ್ನುವ ಕೃತಿ ಭಾರತಕ್ಕೆ ಸಂಬಂಧಿಸಿದ್ದು.
ಆಡಮ್ ಕ್ಕಾಫಮ್ ವಿರಚಿತ ’ಎ ವಿಲೇಜ್ ಇನ್ ಸೌತ್ ಇಂಡಿಯಾ ’ 100 ಪುಟಗಳ ಕೃತಿ ಯಲ್ಲಿ 14 ಅಧ್ಯಾಯಗಳಿವೆ. ಕರಾವಳಿಯ ನದಿಗಳು, ಹಾವುಗಳು , ಹಬ್ಬಗಳಾದ ದೀಪಾವಳಿ ನವರಾತ್ರಿ, ಕಂಬಳ, ಕೋಳಿಅಂಕ, ಯಕ್ಷಗಾನ ಮುಂತಾದ ವಿಚಾರಗಳ ಬಗ್ಗೆ ವಿಸ್ತೃತ ಮಾಹಿತಿ ಇದೆ.
ಪತ್ರಿಕಾಗೋಷ್ಟಿಯಲ್ಲಿ, ಪರಿಸರವಾದಿ ದಿನೇಶ್ ಹೊಳ್ಳ ಹಾಗೂ ನವೀನ್ ಉಪಸ್ಥಿತರಿದ್ದರು.