ಬಂಟ್ವಾಳ,ಜ 22(MSP): ಬಿ.ಸಿ ರೋಡಿನಲ್ಲಿ ಪ್ರಯಾಣಿಕರಿಗೆ ಬಸ್ ಕಾಯಲು ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿ ಕೊಡಿ ಎಂಬ ಬೇಡಿಕೆ ಹಲವಾರು ವರ್ಷಗಳದ್ದು. ಮತ್ತೆ ಅದೇ ಕೂಗು ಸಾರ್ವತ್ರಿಕವಾಗಿ ಕೇಳಿ ಬಂದಿದ್ದು, ಲೋಕಸಭಾ ಚುನಾವಣಾ ಈ ಕಾಲಘಟ್ಟದಲ್ಲಾದರೂ ಈ ಮನವಿಗೆ ಸ್ಪಂದನೆ ದೊರಕಿತೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿ.ಸಿ ರೋಡಿನ ಹೃದಯ ಭಾಗದಲ್ಲಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ಇದ್ದ ಬಸ್ ನಿಲ್ದಾಣವನ್ನು ಸಂಪೂರ್ಣ ವಾಗಿ ಕೆಡವಿ ಅದೇ ಜಾಗದಲ್ಲಿ ಪುರಸಭೆ ಅದಾಯದ ಉದ್ದೇಶದಿಂದ ವಾಣಿಜ್ಯ ಸಂಕೀರ್ಣ ವನ್ನು ನಿರ್ಮಾಣ ಮಾಡಿ ಖಾಸಗಿ ಬಸ್ ನಿಲ್ದಾಣವಾಗಿ ಮಾರ್ಪಾಡು ಮಾಡಿದೆ. ವಾಣಿಜ್ಯ ಸಂಕೀರ್ಣ ನಿರ್ಮಾಣ ವಾದ ಬಳಿಕ ಪ್ರಯಾಣಿಕರಿಗೆ ಬಸ್ ಕಾಯಲು ಸರಿಯಾದ ತಂಗುದಾಣವಿಲ್ಲದೆ ಮಳೆ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಕಳೆದ ಹಲವಾರು ವರ್ಷಗಳಿಂದ ಸತತವಾಗಿ ಮುಂದುವರಿದಿದೆ.
ಈ ಬಗ್ಗೆ ಸಾರ್ವಜನಿಕ ಸಂಘಟನೆಗಳು ಹಲವು ಉನ್ನತ ಮಟ್ಟದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಪಡೆಯಲು ಸಾಧ್ಯ ವಾಗಿಲ್ಲ. ಆ ಬಳಿಕ ಸರಕಾರಗಳು ಬದಲಾದವು , ಅಧಿಕಾರಿಗಳು ಬದಲಾದರೂ ಬಿಸಿರೋಡಿನ ಸ್ಥಿತಿ ಮಾತ್ರ ಬದಲಾಗದೇ ಹಾಗೆಯೇ ಉಳಿದಿರುವುದು ಮಾತ್ರ ವಿಪರ್ಯಾಸವೇ ಸರಿ. ಮಾತೆತ್ತಿದರೆ ಬದಲಾಗಿದೆ ಬಂಟ್ವಾಳ, ಬದಲಾಗುತ್ತಿದೆ ಬಿಸಿರೋಡು, ಇನ್ನೇನು ಅನೇಕ ಸ್ಲೋಗನ್ ನಮ್ಮು ಕಿವಿಯೊಳಗೆ ಹೊಕ್ಕಂತಾಗಿತ್ತದೆ ವಿನಃ ಬಂಟ್ವಾಳ ತಾಲೂಕಿನ ಹೃದಯ ಭಾಗದ ಸಮಸ್ಯೆಗಳೇ ಈಗಿರುವಾಗ ಇನ್ನೂ ಗ್ರಾಮೀಣ ಪ್ರದೇಶದ ಸ್ಥಿತಿ ಹೇಗಿರಬಹುದು ಎಂಬ ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ.
ಮಕ್ಕಳಿಂದ ಹಿಡಿದು ಮುದುಕರ ತನಕ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಡೆ ಹಿಡಿದು ಹೊದ್ದೆಯಾಗಿ ಬಸ್ ಕಾಯುತ್ತಾ ನಿಲ್ಲಬೇಕಾದರೆ, ಬೇಸಿಗೆಕಾಲದಲ್ಲಿ ಬಿಸಿಲಿನ ತಾಪಕ್ಕೆ ಏನು ಮಾಡಲಾಗದೆ ರಸ್ತೆಯ ಬದಿಯಲ್ಲಿ ಕಾಯುತ್ತಾ ನಿಲ್ಲಬೇಕಾಗಿದೆ.
ಪುರಸಭೆಯ ಆದಾಯದ ದೃಷ್ಟಿಯಿಂದ ವಾಣಿಜ್ಯ ಸಂಕೀರ್ಣ ದ ಎದುರು ಬಸ್ ಬೇ ನಿರ್ಮಾಣ ಮಾಡಿದೆ, ಅದರೆ ಯಾರೊಬ್ಬರೂ ಪ್ರಯಾಣಿಕರಿಗೆ ಇದು ಉಪಯೋಗ ಕ್ಕೆ ಬರುತ್ತಿಲ್ಲ. ಬಸ್ ಬೇ ಯ ಮುಂಬಾಗದಲ್ಲಿ ಯಾವಾಗಲೂ ರಿಕ್ಷಾಗಳು ಕ್ಯೂ ನಿಲ್ಲುವ ದೃಶ್ಯ ನೋಡಿದರೆ ಇದು ರಿಕ್ಷಾ ಸ್ಟ್ಯಾಂಡ್ ಎಂಬಂತಾಗಿದೆ.
ಪುರಸಭೆ ಏನು ಮಾಡಿದರೂ ಅದು ಕೇವಲ ಆದಾಯದ ಹಿನ್ನಲೆಯಲ್ಲಿ ಹೊರತು , ಜನರಿಗೆ ಉಪಯೋಗ ವಾಗುವ ನಿಟ್ಟಿನಲ್ಲಿ ಅವರು ನಿರ್ಮಾಣ ಮಾಡಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ .ಕಳೆದ ಹಲವು ವರ್ಷಗಳಿಂದ ಪ್ರಯಾಣಿಕರು ಮಳೆ ಬಿಸಿಲಿಗೆ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆಯ ಬದಿಯಲ್ಲಿ ಬಸ್ ಪ್ರಯಾಣ ಬೆಳೆಸಲು ಕಾಯುವ ಪರಿಸ್ಥಿತಿ ಇದೆ.ಆದರೆ ಪುರಸಭೆ ಈ ಸಮಸ್ಯೆ ಯ ಬಗ್ಗೆ ಯಾವುದೇ ರೀತಿಯ ಕ್ರಮಕೈಗೊಳ್ಳದೆ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಖಾಸಗಿ ಬಸ್ ನಿಲ್ದಾಣ ದ ಮುಂಭಾಗದಲ್ಲಿ ಜಾಗ ಇದ್ದರೂ ಇಲ್ಲಿ ಬಸ್ ಬೇ ಮಾಡಿಲ್ಲ ಎಂಬುದು ಪ್ರಯಾಣಿಕರ ಆರೋಪ.ಹಾಗಾಗಿ ಈಗ ಪ್ರಯಾಣಿಕರು ಬಸ್ ಕಾಯುವ ರಾಷ್ಟ್ರೀಯ ಹೆದ್ದಾರಿ ಯ ಸಮೀಪ ವಿರುವ ಜಾಗದಲ್ಲಿ ಕನಿಷ್ಟ ಸೆಲ್ಟರ್ ಅಳವಡಿಸಿ ತಾತ್ಕಾಲಿಕ ಪ್ರಯಾಣಿಕ ರ ತಂಗುದಾಣವನ್ನು ನಿರ್ಮಾಣಾ ಮಾಡುವಂತೆ ಮನವಿ ಮಾಡುತ್ತಿದ್ದಾರೆ.