ತುಮಕೂರು, ಜ 22(MSP): ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿಗಳ ಲಿಂಗ ಶರೀರದ ಕ್ರಿಯಾ ಸಮಾಧಿ ವಿಧಿ ವಿಧಾನ ವೀರಶೈವ ಲಿಂಗಾಯಿತ ಆಗಮೋಕ್ತ ರೀತಿಯಲ್ಲಿ ನಡೆಯಲಿದ್ದು ಇದಕ್ಕಾಗಿ ಸಿದ್ದತೆಗಳು ಆರಂಭಗೊಂಡಿದೆ. ಶ್ರೀಗಳು ಇಚ್ಚಿಸಿದಂತೆ ಅವರೇ ಬಹಳ ಹಿಂದೆ ಗುರುತಿಸಿದ್ದ ಸ್ಥಳದಲ್ಲಿ ಅವರ ಅಂತಿಮ ಕಾರ್ಯವಿಧಿಗಳು ನಡೆಯಲಿದೆ. ಮಠದ ಅವರಣದಲ್ಲಿ ಉದ್ಧಾನ ಶಿವಯೋಗಿಗಳ ಗದ್ದುಗೆ ಪಕ್ಕದಲ್ಲಿ ಈಗಾಗಲೇ ನಿರ್ಮಿಸಿರುವ ಗದ್ದುಗೆ ಮಂದಿರದಲ್ಲಿ ಸಿದ್ದಗಂಗಾ ಶ್ರೀಗಳ ಅಂತಿಮ ಕಾರ್ಯಗಳು ನಡೆಯಲಿದ್ದು ಶ್ರೀಗಳ ಕ್ರಿಯಾ ಸಮಾಧಿಗೆ ಸುಮಾರು 20ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ವಿಧಿವಿಧಾನ ಆರಂಭಗೊಂಡಿದೆ.
ಇನ್ನೊಂದೆಡೆ ತುಮಕೂರು ಸಿದ್ದಗಂಗಾಮಠದತ್ತ ಶ್ರೀಗಳ ಅಂತಿಮ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಸಂಜೆ 6ಗಂಟೆವರೆಗೂ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ಆ ಬಳಿಕವೇ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ.
ಮೊದಲಿಗೆ ಶ್ರೀಗಳ ಪಾರ್ಥಿವ ಶರೀರಕ್ಕೆ ನಾಡಿನ ಪುಣ್ಯ ನದಿಗಳಿಂದ ತರಿಸಿರುವ ಪವಿತ್ರ ತೀರ್ಥಗಳಿಂದ ಅಭಿಷೇಕ ನೆರವೇರಿಸಿ ಕೊನೆಯ ಪುಣ್ಯಸ್ನಾನಮಾಡಿಸಲಾಗುತ್ತದೆ. ಹೊಸ ವಸ್ತ್ರ ಧಾರಣೆ ಮಾಡಿಸಿ ಆ ಬಳಿಕ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರಿಗೆ ಪಟ್ಟಾಧಿಕಾರ ಹಸ್ತಾಂತರ ಮಾಡಲಾಗುತ್ತದೆ. ಲಿಂಗ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಲಾಗುತ್ತದೆ. ನಂತರ ಇಷ್ಟ ಲಿಂಗ, ಉಪ್ಪು, ಮೆಣಸು ನಂತರ ವಿಭೂತಿ ಗಟ್ಟಿ ಹಾಕಿ ಕೊನೆಯದಾಗಿ ಮೃತ್ತಿಕೆ ಹಾಕಿ ಪಾರ್ಥಿವ ಶರೀರವನ್ನು ಮುಚ್ಚಲಾಗುತ್ತದೆ. ಈ ಎಲ್ಲಾ ಕ್ರಿಯಾ ವಿಧಿವಿಧಾನವನ್ನು ಎಲ್ ಇಡಿ ಪರದೆ ಮೇಲೆ ತೋರಿಸಲಾಗುತ್ತದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.