ಮಂಗಳೂರು, ಜು 14 (DaijiworldNews/SM): ದ.ಕ. ಜಿಲ್ಲೆ ಮದ್ಯ ಸೇವನೆಯಲ್ಲಿ ಅಗ್ರಸ್ಥಾನದಲ್ಲಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಸತ್ಯಶೋಧನೆ ನಡೆಸಿದ ಸಂದರ್ಭದಲ್ಲಿ ಇದು ಸುಳ್ಳು ಸುದ್ದಿ ಎಂದು ಬಹಿರಂಗಗೊಂಡಿದೆ.
ಇಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯ ಪೋಸ್ಟರ್ ವೈರಲ್ ಆಗಿದೆ. ಮದ್ಯ ಮಾರಾಟದಲ್ಲಿ ದ.ಕ ಅಗ್ರಸ್ಥಾನ ಅನ್ನೋದು ಸುಳ್ಳು ಸುದ್ದಿ ಎಂದು ದೈಜಿವರ್ಲ್ಡ್ಗೆ ಅಬಕಾರಿ ಇಲಾಖೆಯ ಉಪ ಆಯುಕ್ತೆ ಬಿಂದುಶ್ರೀ ಪಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಇತರೆ ಜಿಲ್ಲೆಗಳು ಮದ್ಯ ಮಾರಾಟದಲ್ಲಿ ನಮಗಿಂತ ಮುಂದಿದೆ. ಕಳೆದ ವರ್ಷ ಇಡೀ ರಾಜ್ಯದ ಅಬಕಾರಿ ಆದಾಯ ಅಂದಾಜು 25ರಿಂದ 27 ಸಾವಿರ ಕೋಟಿ ರೂಪಾಯಿಗಳಾಗಿದೆ. ಇದರಲ್ಲಿ ದ.ಕ ಜಿಲ್ಲೆಯ ಆದಾಯ ಕೇವಲ 370 ಕೋಟಿ ರೂಪಾಯಿ ಮಾತ್ರ. ಇದುವೇ ಸ್ಪಷ್ಟವಾದ ನಿದರ್ಶನವಾಗಿದೆ. ಒಂದೊಮ್ಮೆ ದ.ಕ. ಜಿಲ್ಲೆ ನಂಬರ್ 1 ಆಗಿದ್ದಲ್ಲಿ ಇಲ್ಲಿನ ಆದಾಯ ಮಿತಿ ಹೆಚ್ಚಾಗಬೇಕಿತ್ತು.
ಪ್ರತಿ ವರ್ಷಕ್ಕೆ ಅಂದಾಜು 2.2 ಕೋಟಿ ಲೀಟರ್ ಹಾರ್ಡ್ ಲಿಕ್ಕರ್ ಸೇಲ್ ಆಗುತ್ತಿದೆ. ವರ್ಷಕ್ಕೆ 1.4 ಕೋಟಿ ಲೀಟರ್ ಬಿಯರ್ ಮಾರಾಟವಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 25 ಲಕ್ಷ ಬಾಕ್ಸ್ ಹಾರ್ಡ್ ಡ್ರಿಂಕ್ಸ್ ಸೇಲ್ ಆಗುತ್ತಿದೆ. ವರ್ಷಕ್ಕೆ ಸರಾಸರಿ 18 ಲಕ್ಷ ಬಾಕ್ಸ್ ಬಿಯರ್ ಮಾರಾಟ ಮಾಡಲಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟದಿಂದ 370 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ವರ್ಷ 521 ಮದ್ಯದಂಗಡಿಗಳು ಜಿಲ್ಲೆಯಲ್ಲಿ ಇದ್ದವು. ಪ್ರಸ್ತುತ ದ.ಕ ಜಿಲ್ಲೆಯಲ್ಲಿ ಮದ್ಯದಂಗಡಿ ಸಂಖ್ಯೆ 526ಕ್ಕೆ ಏರಿಕೆಯಾಗಿದೆ ಎಂದು ದೈಜಿವರ್ಲ್ಡ್ಗೆ ಅಬಕಾರಿ ಇಲಾಖೆಯ ಉಪ ಆಯುಕ್ತೆ ಬಿಂದುಶ್ರೀ ಪಿ ಸ್ಪಷ್ಟನೆ ನೀಡಿದ್ದಾರೆ.