ಬೈಂದೂರು, ಜು 14 (DaijiworldNews/DB): ಬೈಂದೂರು ಸನಿಹದ ಹೇನಬೇರುವಿನಲ್ಲಿ ಬುಧವಾರ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು, ಕೊಲೆ ನಡೆಸಿ ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕಾರಿನ ಮಾಲಕ ಸದಾನಂದ ಶೇರೆಗಾರ್ ವಂಚನೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆ. ಮೃತ ವ್ಯಕ್ತಿಗೆ ಪರಿಸರದ ವ್ಯಕ್ತಿಯೋರ್ವ ಅಮಲುಭರಿತ ಪಾನೀಯ ನೀಡಿ ಕೊಲೆ ಮಾಡಿದ್ದು, ಇದಕ್ಕೆ ಮಹಿಳೆಯೊಬ್ಬಳು ಸಾಥ್ ನೀಡಿದ್ದಾಳೆ ಎನ್ನಲಾಗುತ್ತಿದೆ. ಕೊಲೆಗೈದ ಬಳಿಕ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸುವ ಉದ್ದೇಶದಿಂದ ಮೃತದೇಹವನ್ನು ಹಿಂಬದಿ ಸೀಟ್ನಲ್ಲಿ ಕುಳ್ಳಿರಿಸಿ ತಂದು ಹೇನಬೇರು ಪ್ರದೇಶದಲ್ಲಿ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬಂದ ಕ್ಯಾನ್ ಕೂಡಾ ಪತ್ತೆಯಾಗಿದೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪೊಲೀಸರ ಒಂದು ತಂಡ ಕಾರ್ಕಳದಲ್ಲಿ ಪರಿಶೀಲನೆ ನಡೆಸುತ್ತಿದೆ.
ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗುವುದಕ್ಕೂ ಮುನ್ನ ಮಂಗಳವಾರ ರಾತ್ರಿ 12.30ಕ್ಕೆ ಸಾಸ್ತಾನ ಟೋಲ್ಗೇಟ್ನಲ್ಲಿ ಉಡುಪಿಯಿಂದ ಕುಂದಾಪುರಕ್ಕೆ ಈ ಕಾರು ಸಂಚರಿಸಿರುವುದು ಗೊತ್ತಾಗಿದೆ. ಅಲ್ಲದೆ, ಇಲ್ಲಿ ಟೋಲ್ ಕಟ್ಟಲು ಮಹಿಳೆಯೊಬ್ಬರು ಕಾರಿನಿಂದ ಇಳಿದಿರುವುದೂ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಕಾರಿನ ಚೇಸಿಸ್ ನಂಬರನ್ನು ವಿಧಿ ವಿಜ್ಞಾನ ತಜ್ಞರ ಸಹಾಯದಿಂದ ಸ್ವಚ್ಚಗೊಳಿಸಲಾಗಿದ್ದು, ಇದರ ಆಧಾರದಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರೆಗಾರ್ ಎಂಬುದಾಗಿ ಮೃತ ವ್ಯಕ್ತಿಯನ್ನು ಗುರುತಿಸಲಾಗಿದೆ. ಆದರೆ ಇವರು ಅಥವಾ ಕಾರು ನಾಪತ್ತೆಯಾಗಿರುವ ಬಗ್ಗೆ ಊವರೆಗೆ ಯಾವುದೇ ದೂರುಗಳು ದಾಖಲಾಗದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.