ಉಡುಪಿ, ಜು 14 (DaijiworldNews/HR): ಮಲ್ಪೆಯಿಂದ ಕರಾವಳಿ ಜಂಕ್ಷನ್ವರೆಗಿನ ರಸ್ತೆಯಲ್ಲಿ ಅತ್ಯಂತ ಅಪಾಯಕಾರಿ ಆಳವಾದ ಹೊಂಡಗಳ ಬಗ್ಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮತ್ತು ನಗರಸಭೆಯ ಪೌರಾಯುಕ್ತ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ನಾಚಿಕೆಗೇಡು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿಯೋನ್ ಡಿಸೋಜಾ ಹೇಳಿದ್ದಾರೆ.
ಕರಾವಳಿ ಜಂಕ್ಷನ್, ಆದಿಉಡುಪಿ, ಪಂದುಬೆಟ್ಟು, ಕಲ್ಮಾಡಿ, ಮಲ್ಪೆ ಪರಿಸರದಲ್ಲಿ ಪ್ರತಿನಿತ್ಯ ಹಲವಾರು ಅಫಘಾತಗಳು ನಡೆದು, ಪ್ರಯಾಣಿಕರು ಮತ್ತು ವಾಹನ ಸವಾರರು ಗಾಯಗೊಂಡರೂ ಸ್ಥಳೀಯ ನಗರಸಭಾ ಜನಪ್ರತಿನಿಧಿಗಳು, ನಗರಸಭೆಯ ಅಧಿಕಾರಿಗಳು ಕೇವಲ ತೇಪೆ ಹಾಕಿ ಸುಮ್ಮನಾಗುತ್ತಿದ್ದಾರೆ. ಅವರು ಹಾಕಿದ ತೇಪೆ ಕಾರ್ಯ ಒಂದೇ ಮಳೆಗೆ ಹೋಗುತ್ತಿದ್ದು ಮತ್ತದೇ ಸಮಸ್ಯೆಯನ್ನು ತಂದೊಡ್ಡುತ್ತಿದೆ.
ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸ್ಥಳೀಯರಿಂದ ಪದೇ ಪದೇ ದೂರುಗಳು ಬಂದರೂ ಸ್ಥಳೀಯ ಪ್ರದೇಶಗಳ ನಗರಸಭಾ ಸದಸ್ಯರು ಪ್ರತಿಕ್ರಿಯಿಸಿ, ‘ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿದ್ದೇವೆ, ಎನ್ಎಚ್ ಅಧಿಕಾರಿಗಳು ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಮತ್ತು ನಾವು ದೂರು ನೀಡಿದ್ದೇವೆ ಎನ್ನುವ ಉತ್ತರ ನೀಡಿ ಸುಮ್ಮನಾಗುತ್ತಿದ್ದಾರೆ. ಸಭೆಯಲ್ಲಿ ವಿಷಯವನ್ನು ಚರ್ಚಿಸುವುದು ಮತ್ತು ಅದರ ಬಗ್ಗೆ ಏನನ್ನೂ ಮಾಡದಿರುವುದು ಪ್ರಯಾಣಿಕರಿಗೆ ಯಾವುದೇ ರೀತಿಯ ಸುರಕ್ಷತೆಯನ್ನು ಹೇಗೆ ಒದಗಿಸಿದಂತಾಗುತ್ತದೆ. ಹಾಗಿದ್ದರೆ ಇತ್ತೀಚೆಗೆ ಉಡುಪಿಯ ಶಾಸಕರಾಗಲಿ, ಸಂಸದರಾಗಲಿ ಈ ಮಾರ್ಗದಲ್ಲಿ ಸಂಚರಿಸಿಲ್ಲವೇ?ಎಂದು ಪ್ರಶ್ನಿಸಿದ್ದಾರೆ.
ಮಳೆ ಆರಂಭವಾಗುವ ಮುನ್ನವೇ ರಸ್ತೆಗಳ ಮೇಲ್ಮೈ ಹದಗೆಟ್ಟಿದ್ದು, ಇದು ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷತನವೇ ಹೊರತು ಬೇರೆನೂ ಅಲ್ಲ. ಹೊಸ ರಸ್ತೆ ಅಭಿವದ್ಧಿಗೆ ನೂರಾರು ಕೋಟಿ ಘೋಷಣೆ ಮಾಡಿ ಮನ್ನಣೆ ಗಳಿಸಿ, ಈಗಿರುವ ರಸ್ತೆಯ ಬಗ್ಗೆ ಏನನ್ನೂ ಮಾಡದೆ ಪ್ರಯಾಣಿಕರ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಕೆಲಸ ಮಾಡುತ್ತಿದ್ದಾರೆ.
ಮಳೆಗಾಲದಲ್ಲಿ ಗುಂಡಿಗಳಿಗೆ ಪ್ಯಾಚ್ವರ್ಕ್ ಮಾಡಲು ಸಾಧ್ಯವಾಗದಿದ್ದರೆ, ಹೊಂಡಗಳ ಬಳಿ ವಾಹನಗಳು ಬಂದಾಗ ವಾಹನಗಳನ್ನು ನಿಧಾನಗೊಳಿಸಲು ಕನಿಷ್ಠ ಮುನ್ನೆಚ್ಚರಿಕೆ ಫಲಕ ಅಥವಾ ಪ್ರತಿಫಲಕ ಬ್ಯಾರಿಕೇಡ್ಗಳನ್ನು ಹಾಕಬಹುದಲ್ಲವೇ? ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾದರೆ ಮತ್ತು ಜನರ ದೂರುಗಳನ್ನು ನಿರ್ಲಕ್ಷಿಸುವುದನ್ನು ಮುಂದುವರೆಸಿದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.