ಉಡುಪಿ, ಜ 22(MSP): ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಬೋಟ್ ಸಮೇತ ನಾಪತ್ತೆಯಾಗಿರುವ 7 ಮೀನುಗಾರರು ಅಪಹರಣಕ್ಕೆ ಒಳಗಾಗಿರುವ ಶಂಕೆ ಬಲವಾಗುತ್ತಿದ್ದು, ಪತ್ತೆ ಕಾರ್ಯಕ್ಕೆ ಮಹಾರಾಷ್ಟ್ರದ ಪೊಲೀಸರು ಹಾಗೂ ಮೀನುಗಾರರು ಸಹಕಾರ ನೀಡದೆ ಇರುವ ಹಿನ್ನಲೆಯಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಬೇಕು ಎಂದು ಮೀನುಗಾರ ಕುಟುಂಬ ವರ್ಗ ಆಗ್ರಹಿಸಿದೆ.
ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿದ್ದ 7 ಮಂದಿ ಮೀನುಗಾರರು ನಾಪತ್ತೆಯಾಗಿ 38 ದಿನ ಕಳೆದಿವೆ. ನೌಕಾಪಡೆ ಹಡಗಿನ ಮೂಲಕ ಸಾಕಷ್ಟು ಕಾರ್ಯಾಚರಣೆ ನಡೆಸಿದರೂ ಮಹತ್ವದ ಸುಳಿವು ಲಭಿಸಿಲ್ಲ. ಮಿಲಿಟರಿ ಕಾರ್ಯಾಚರಣೆ ನಡೆಸುವಂತೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದಲ್ಲಿರುವ ನಮ್ಮ ಜನಪ್ರತಿನಿಧಿಗಳು ಕೇಂದ್ರಕ್ಕೆ ಒತ್ತಡ ಹೇರಬೇಕು ಎಂದು ಕುಟುಂಬದವರು ತಿಳಿಸಿದ್ದಾರೆ. ಅಲ್ಲದೇ ನೌಕಾಪಡೆಗೆ ಢಿಕ್ಕಿಯಾಗಿ ಅವಘಡ ಸಂಭವಿಸುತ್ತದೆ ಎನ್ನುವುದು ಶುದ್ದ ಸುಳ್ಳು. ಭಾರತೀಯ ನೌಕಾಪಡೆಯ ಸೂಚನೆಯಂತೆ ರಾತ್ರಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ಗಳಿಗೆ ಸಿಗ್ನಲ್ ಲೈಟ್ನ ನಿಯಮ ಇದೆ. ಬೋಟ್ ಟ್ರಾಲಿಂಗ್ನಲ್ಲಿರುವ ಬೋಟಿನ ಮುಂಭಾಗ ಮತ್ತು ಹಿಂಭಾಗದ ದೀಪ, ನಿಂತಿರುವ ಸಮಯದಲ್ಲಿ ಹಿಂಭಾಗ, ಮುಂಭಾಗ ಅಲ್ಲದೆ ಎಡ ಮತ್ತು ಬಲಬದಿಯಲ್ಲಿ ಲೈಟ್ ಉರಿಸಿರಬೇಕು. ಈ ಲೈಟ್ ಸುಮಾರು ಒಂದುವರೆ ಕಿ.ಮೀ ದೂರಕ್ಕೂ ಗೋಚರವಾಗಲಿದ್ದು ಬೋಟ್ ಇರುವ ಮಾಹಿತಿ ಸಿಗಲಿದೆ ಎನ್ನುತ್ತಾರೆ ಮೀನುಗಾರರು.
ಮೀನುಗಾರರು ನಾಪತ್ತೆಯಾಗಿ ೩೭ ದಿನಗಳೇ ಕಳೆದಿದೆ ನೌಕಾ ಪಡೆ ಮೂಲಕ ಮಾತ್ರವೇ ಹುಡುಕಾಟ ನಡೆದಿದೆ. ಭೂ ಸೇನೆಯಿಂದಲೂ ಹುಡುಕಾಟ ನಡೆಯಬೇಕು, ಸೋನಾರ್ ತಂತ್ರಜ್ಞಾನದಲ್ಲಿ ಹುಡುಕಾಟ ನಡೆದರೂ ಸಿಳಿವು ದೊರಕಿಲ್ಲ. ಪಾಕಿಸ್ತಾನಕ್ಕೂ ಹೋಗಿಲ್ಲ. ಹಾಗದರೆ ಬೋಟ್ ಎಲ್ಲಿ ಹೋಗಿದೆ? ನದಿಗಳಲ್ಲಿ ಶೋಧ ಕಾರ್ಯ ವ್ಯವಸ್ಥಿತ ಮತ್ತು ಯೋಜನಾಬದ್ಧವಾಗಿ ನಡೆದಿಲ್ಲ. ಮಹಾರಾಷ್ಟ್ರ ಭಾಗದಲ್ಲಿ ಅಲ್ಲಿನ ಯಾವುದೇ ಇಲಾಖೆಗಳು ಕಾರ್ಯಾಚರಣೆಗೆ ಸೂಕ್ತ ಸಹಕಾರ ನೀಡಿಲ್ಲ. ಪೊಲೀಸರು ಬಂದರು ಸಮೀಪದ 500 ಮೀಟರ್ ದೂರಕ್ಕಷ್ಟೇ ತೆರಳಿ ವಾಪಸು ಬಂದಿದ್ದಾರೆ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಮೀನುಗಾರರು ಆರೋಪಿಸಿದ್ದಾರೆ.
ಅಪಹರಣಕಾರರು ನಮ್ಮವರಿಗೆ ಸರಿಯಾಗಿ ಊಟ ತಿಂಡಿ ಕೊಟ್ಟಿದ್ದಾರೋ? ಎಷ್ಟು ಚಿತ್ರಹಿಂಸೆ ನೀಡುತ್ತಿದ್ದಾರೆಯೋ? ಅವರು ಮನುಷ್ಯರಾ? ನನ್ನ ಕೈಗೆ ಸಿಗಬೇಕು. ಅವರ ಕೈ ಕಾಲು ಮುರಿದು ಹಾಕುತ್ತಿದೆ. ಅವರು ಬೋಟ್ ಹಾಗೂ ಮೀನುಗಳನ್ನು ಇಟ್ಟುಕೊಂಡು ಮೀನುಗಾರರನ್ನು ಬಿಡಬಹುದಿತ್ತಲ್ಲ? ಎಂದು ನಾಪತ್ತೆಯಾದ ಮೀನುಗಾರ ದಾಮೋದರ ಅವರ ಅಕ್ಕ ರಮಣಿ ಆಕ್ರೋಶವನ್ನು ವ್ಯಕ್ತಪಡಿಸಿದರು.