ತುಮಕೂರು 22(SS): ನಡೆದಾಡುವ ದೇವರು' ಎಂದೇ ಕರೆಸಿಕೊಳ್ಳುವ ತುಮಕೂರು ಸಿದ್ಧಗಂಗಾ ಮಠದ 111 ವರ್ಷದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವಯೋಸಹಜ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಶ್ರೀಗಳು ನಿನ್ನೆ ಬೆಳಗ್ಗೆ 11.45ಕ್ಕೆ ಲಿಂಗೈಕ್ಯರಾಗಿದ್ದಾರೆ.
ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದು, ನಾಡಿಗೆ ನಾಡೇ ಕಂಬನಿ ಮಿಡಿದಿದೆ. ಸಿದ್ದಗಂಗಾ ಮಠದ ಮಕ್ಕಳು ಸ್ವಾಮೀಜಿ ಅಗಲಿಕೆಯಿಂದ ಬಿಕ್ಕಿಬಿಕ್ಕಿ ಅಳತೊಡಗಿದ್ದಾರೆ. ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದು ಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ತಾಯಿಯನ್ನು ಕಂಡ ಮಗುವಿನಂತೆ ಹಾತೊರೆದು ಬಂದಿದ್ದ ಮಕ್ಕಳು, ಸ್ವಾಮೀಜಿಯವರನ್ನು ನೆನೆದು ಕಣ್ಣೀರಿಡುತ್ತಿದ್ದಾರೆ.
ಮಕ್ಕಳೊಂದಿಗೆ ಸ್ವಾಮೀಜಿ ಬದುಕಿನ ಹೆಚ್ಚಿನ ಸಮಯವನ್ನು ಕಳೆದಿದ್ದರು. ಮಕ್ಕಳೆಂದರೆ ಸ್ವಾಮೀಜಿಗೆ ಇಷ್ಟ. ಅದೇ ರೀತಿ ಸ್ವಾಮೀಜಿ ಕಂಡರೆ ಮಕ್ಕಳಿಗೂ ಪ್ರಾಣ. ಶ್ರೀಗಳು ಲಿಂಗೈಕ್ಯರಾಗಿರುವುದರಿಂದ ಮಠದ ಮಕ್ಕಳಿಗೆ ಬರಸಿಡಿಲು ಬಡಿದಂತಾಗಿದೆ. ಅವರನ್ನು ಕಾಣಲು ಮಕ್ಕಳು ಕಾತರಿಸಿದ ಹಾಗೂ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳು ಮನಕಲಕುವಂತೆ ಮಾಡಿದೆ.
ಶ್ರೀಗಳ ಇಚ್ಛೆಯಂತೆ ಅವರು ಲಿಂಗೈಕ್ಯರಾದ ಸುದ್ದಿಯನ್ನು ಮಠದ ಮಕ್ಕಳು ಮಧ್ಯಾಹ್ನದ ಭೋಜನ ಸ್ವೀಕರಿಸಿದ ನಂತರ ಪ್ರಕಟಿಸಲಾಗಿದೆ. ಮಠದಲ್ಲಿ ಪ್ರಾರ್ಥನೆ ಸಲ್ಲಿಸಿದ ಮಕ್ಕಳು ಮಂತ್ರ ಪಠಿಸಿದ್ದಾರೆ.
ಶ್ರೀಗಳ ಅಂತಿಮ ದರ್ಶನಕ್ಕೆ ಮಠದಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಲಕ್ಷಾಂತರ ಭಕ್ತರು ಸ್ವಾಮೀಜಿಯ ದರ್ಶನ ಪಡೆದಿದ್ದಾರೆ.