ನಟಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಅವರು ನಿರ್ದೇಶನ ಮಾಡುತ್ತಿರುವ ಯಾನ ಚಿತ್ರದ ಮೂಲಕ ಅವರು ಮೂವರು ಮಕ್ಕಳು ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಪ್ರೋಮೊ ಸಾಂಗ್ ಅನ್ನು ನಟ ಕಿಚ್ಚ ಸುದೀಪ್ ಅವರು ಇಂದು ನಡೆದ ಪ್ರೋಮೊ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.
ಜೈಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್ ತಮ್ಮ ಮಕ್ಕಳಾದ ವೈಭವಿ, ವೈನಿಧಿ ಮತ್ತು ವೈಸಿರಿಯನ್ನು ನಾಯಕಿಯರನ್ನಾಗಿ ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ. ವಿಜಯಲಕ್ಷ್ಮೀ ಸಿಂಗ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ "ಸಿಂಪಲ್' ಸುನಿ ಅವರು ಸಂಭಾಷಣೆ ಬರೆದಿದ್ದಾರೆ.
ಕರಂ ಚಾವ್ಲಾ ಅವರ ಛಾಯಾಗ್ರಹಣ, ಜೋಶ್ವಾ ಶ್ರೀಧರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ವಿಜಯಲಕ್ಷ್ಮೀ ಸಿಂಗ್ ಮತ್ತು ಜೈಜಗದೀಶ್ ಜೊತೆಗೆ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಅವರು ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್ ಅವರು, ಜಗದೀಶ್ರನ್ನು ಮಾಮ ಅಂತ ಮೊದಲನಿಂದಲೂ ಕರೆಯುತ್ತೇನೆ. ನನ್ನ ಅಪ್ಪ, ಮಾಮಾ ನಾಯಕನಾಗಿರುವ ಪವಿತ್ರಪಾಪಿ ಸಿನಿಮಾ ನಿರ್ಮಾಣ ಮಾಡಿದ್ದರು. ಸಿಂಗ್ ಮನೆತನದವರು ನಾಲ್ಕನೆ ತಲೆಮಾರಿನವರು ಆಗಿದ್ದರೆ, ನಾನು ಎರಡನೆ ತಲೆಮಾರಿಗೆ ಸೇರುತ್ತೇನೆ. ಪ್ರಾರಂಭದಲ್ಲಿ ಅವರು ನನ್ನ ಚಿತ್ರದ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಇಂದು ಅವರ ಸಿನಿಮಾಗೆ ಬಂದಿರುವೆ. ಇಂತಹ ವಾತಾವರಣಗಳು ಮುಂದುವರೆಯಬೇಕು. ಪ್ರಯಾಣ ಎಲ್ಲರ ಜೀವನದಲ್ಲಿ ಬಂದು ಹೋಗುತ್ತದೆ. ವರ್ಷಗಳ ಕೆಳಗೆ ಹುಡುಗಿಯರಾಗಿದ್ದವರು ಇಂದು ಲೇಡೀಸ್ ಆಗಿದ್ದಾರೆ. ವಿಶೇಷ ಗೀತೆಯ ರಚನೆ, ಸಂಗೀತ ಒದಗಿಸಿ ಹಾಡಿರುವ ಹೊಸ ಪ್ರತಿಭೆ ಸಿದ್ದಾರ್ಥ್ರನ್ನು ನೋಡುತ್ತಾ ನಿಮ್ಮ ದೇಹಸೌಂದರ್ಯಕ್ಕಿಂತ ಕಂಠ ಚೆನ್ನಾಗಿದೆ. ಭವಿಷ್ಯ ಚೆನ್ನಾಗಿದೆ ಅದನ್ನು ರೂಪಿಸಿಕೊಳ್ಳಿ ಅಂತ ಕಿವಿಮಾತು ಹೇಳಿದರು ಸುದೀಪ್.
ಕನ್ನಡ ಚಿತ್ರ ರಂಗದಲ್ಲಿ ಭಾರೀ ಸುದ್ದಿ ಮಾಡಿರುವ 'ಮಾರ್ಚ್ 22' ಸಿನೆಮಾವು ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಮೊದಲ ಸಿನೆಮಾವಾಗಿದೆ. ಈ ಸಿನೆಮಾ ಕರ್ನಾಟಕವಲ್ಲದೇ, ದುಬೈ, ಅಬುಧಾಬಿ, ಶಾರ್ಜಾ ಸೇರಿದಂತೆ ಯುಎಇಯಲ್ಲಿ ಕೂಡ ಬಿಡುಗಡೆಗೊಂಡು ಅದ್ಬುತ ಪ್ರದರ್ಶನ ಕಂಡಿತ್ತು.