ಹಳೆಯಂಗಡಿ,, ಜು 14 (DaijiworldNews/DB): ಮಂಗಳೂರಿನಲ್ಲಿ ಅಂಚೆ ಇಲಾಖೆ ಉದ್ಯೋಗಿಯಾಗಿದ್ದ ಮಂಡ್ಯ ಮೂಲದ ಯುವಕನೋರ್ವ ಪಾವಂಜೆ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಂಡ್ಯದ ಮದ್ದೂರು ತೂಬಿನಕರೆ ನಿವಾಸಿ ರಾಕೇಶ್ ಗೌಡ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಂಗಳೂರು ಕೋರ್ಟ್ ಆವರಣದ ಅಂಚೆ ಕಚೇರಿಯಲ್ಲಿ ಈತ ಉದ್ಯೋಗ ನಿರ್ವಹಿಸುತ್ತಿದ್ದ. ಸೇತುವೆ ಮೇಲೆ ದ್ವಿಚಕ್ರ ವಾಹನ ನಿಲ್ಲಿಸಿ ಮೊಬೈಲ್ ಮತ್ತು ಇತರ ವಸ್ತುಗಳನ್ನು ಅದರಲ್ಲೇ ಇಟ್ಟಿದ್ದ. ಅಲ್ಲದೆ ಇದಕ್ಕೂ ಮೊದಲು ತಾನು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಕುರಿತು ವಾಟ್ಸಾಪ್ ಮುಖಾಂತರ ಸಂಬಂಧಿಕರಿಗೆ ಮಾಹಿತಿಯನ್ನೂ ನೀಡಿದ್ದ. ಮತ್ತು ಲೊಕೇಶನ್ ಕೂಡಾ ಶೇರ್ ಮಾಡಿದ್ದ. ಕೂಡಲೇ ಸಂಬಂಧಿಕರು ಮೂಲ್ಕಿ ಮತ್ತು ಸುರತ್ಕಲ್ ಠಾಣೆಗೆ ಮಾಹಿತಿ ನೀಡಿದ್ದರು. ಆದರೆ ಈ ವೇಳೆಗಾಗಲೇ ಆತ ಆತ್ಮಹತ್ಯೆಗೆ ಶರಣಾಗಿದ್ದ.
ಅಗ್ನಿಶಾಮಕ ದಳ ಕೂಡಲೇ ನದಿಯಲ್ಲಿ ಹುಡುಕಾಟ ನಡೆಸಿದ್ದು, ಸಂಜೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ಮೂಲ್ಕಿ ಕಾರ್ನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.