ಮಂಗಳೂರು, ಜು 13 (DaijiworldNews/SM): ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಕೂಳೂರಿನಲ್ಲಿ ಅವ್ಯವಸ್ಥೆಯ ಕಾರಣದಿಂದಾಗಿ ವಾಹನ ಸವಾರರು ಶಾಪ ಹಾಕುವ ಪರಿಸ್ಥಿತಿ ಎದುರಾಗಿದೆ. ಕೂಳೂರು ಸೇತುವೆಯಲ್ಲಿ ಸಂಚರಿಸುವುದೇ ಒಂದು ಸಾಹಸಮಯ ಕೆಲಸ. ಕೂಳೂರು ಸೇತುವೆಯ ಮೇಲೆ ಗುಂಡಿಗಳ ನಡುವೆ ಒಂದಿಷ್ಟು ಸರಿದಾರಿ ಎಲ್ಲಿದೆ ಎಂದು ಹುಡುಕಿ ಪರದಾಡಿಕೊಂಡು ಸಂಚಾರಿಸುವ ದುಸ್ಥಿತಿ ಸವಾರರದ್ದಾಗಿದೆ.
ಕೇವಲ ಹೊಂಡ ಗುಂಡಿಗಳೇ ತುಂಬಿರುವ ಈ ರಸ್ತೆಯಲ್ಲಿ ಜೀವ ಕೈಯ್ಯಲಿಟ್ಟುಕೊಂಡು ಸಂಚರಿಸಲೇ ಬೇಕಾದ ಅನಿವಾರ್ಯತೆ ಸವಾರರದ್ದು. ಒಂದು ರಾಷ್ಟ್ರೀಯ ಹೆದ್ದಾರಿಯ ಕಥೆ ಹೀಗಾದ್ರೆ ಸಣ್ಣ ಪುಟ್ಟ ರಸ್ತೆಗಳ ವಿಷಯ ಮಾತನಾಡೋ ಹಾಗೇ ಇಲ್ಲ. ದಿನದಲ್ಲಿ ಸಾವಿರಾರು ಮಂದಿ, ಹಲವಾರು ಗೂಡ್ಸ್ ವಾಹನ, ಬಸ್ಸುಗಳು, ದ್ವಿಚಕ್ರ ವಾಹನ ಸಂಚರಿಸುವ ಹಾಗೂ ಮಂಗಳೂರಿನಿಂದ ಉಡುಪಿಗೆ ತೆರಳುವ ಪ್ರಮುಖ ರಸ್ತೆಯ ಅವ್ಯವಸ್ಥೆಗೆ ಸ್ಪಂದಿಸುವವರೇ ಇಲ್ಲದಂತಾಗಿದೆ.
ಜನಪ್ರತಿನಿಧಿಗಳು ದಿನನಿತ್ಯ ಈ ಸೇತುವೆ ಮೇಲೆ ಸಂಚಾರಿಸುವಾಗ ಕಣ್ಣು ಮುಚ್ಚಿಕೊಂಡು ತೆರಳುತ್ತಾರೆ ಏನೋ ಎಂಬ ಭಾವನೆ ಬರುತ್ತದೆ. ಈ ರಸ್ತೆಯ ಹೊಂಡ - ಗುಂಡಿ ಅವರ ಕಣ್ಣಿಗೆ ಬಿದ್ದಿಲ್ಲ. ಇಡೀ ದಿನ ವಾಹನಗಳ ಸಂಖ್ಯೆ ಹೆಚ್ಚಾಗಿರುವ ಈ ಸೇತುವೆಯಲ್ಲಿ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಘಾತ ಕಟ್ಟಿಟ್ಟ ಬುತ್ತಿ. ಒಂದು ಕಡೇ ವಾಹನ ದಟ್ಟಣೆ, ಇನ್ನೊಂದು ಕಡೆ ಹೊಂಡ ಗುಂಡಿಯ ನರಕಸದೃಶ ರಸ್ತೆ. ಈ ರಸ್ತೆಯಲ್ಲಿ ಅಂಬ್ಯುಲೆನ್ಸ್ ವಾಹನಗಳು ಸಿಲುಕಿಕೊಂಡು ಅದೆಷ್ಟು ಬಾರಿ ಸಮಸ್ಯೆ ಅನುಭವಿಸಿದೆ. ಇಲ್ಲಿ ರೋಗಿಗಳನ್ನು ಕರೆದುಕೊಂಡು ಹೋದಲ್ಲಿ ಅವರ ಆರೋಗ್ಯಕ್ಕೆ ಮತ್ತಷ್ಟು ಸಮಸ್ಯೆಯಾಗಬಹುದು ಎಂಬುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಇನ್ನೂ ಆಪದ್ಭಾಂಧವ ಸಮಾಜ ಸೇವಾ ಸಂಸ್ಥೆ ಯಿಂದ ಮಂಗಳೂರು ಉತ್ತರ ಸಂಚಾರಿ ಠಾಣೆಗೆ ರಸ್ತೆ ಅವ್ಯವಸ್ಥೆ ಬಗ್ಗೆ ದೂರು ನೀಡಿದ್ರೆ ಇದು ಯಾರ ವ್ಯಾಪ್ತಿಗೆ ಬರುತ್ತೆ ಎನ್ನುವುದೂ ಗೊತ್ತಿಲ್ಲ ಎಂದು ಬೇಜವಬ್ದಾರಿತನದ ಉತ್ತರ ನೀಡಿದ್ದಾರೆ. ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾಗಬೇಕಾಗಿದೆ.