ಮಂಗಳೂರು, ಜು 13 (DaijiworldNews/SM): ನಾರಾಯಣ ಗುರುಗಳ ಪಠ್ಯ ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರವನ್ನು ಎಚ್ಚರಿಸುವಂತಹ ಕೆಲಸ ಮಾಡಿದ್ದೆವು. ಪ್ರಮಾದವಾಗಿದೆ, ಸರಿಪಡಿಸಿ ಎಂದು ಎಚ್ಚರಿಕೆ ಕೊಟ್ಟಿದ್ದೆವು. ಈ ಥರದ ಪ್ರಮಾದ ಆಗಿಯೇ ಇಲ್ಲ, ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ. ಇದು ಸುಳ್ಳು ಎಂದು ಸರಕಾರ ಸುಳ್ಳು ಹೇಳಿಕೆಗಳನ್ನು ಕೊಡುತ್ತಿತ್ತು. ಸುಳ್ಳು ಎಂದವರು ಇಂದು ಪಠ್ಯವನ್ನು ಸರಿ ಮಾಡಲು ಹೊರಟಿದ್ದಾರೆ ಎಂದು ಕುದ್ರೋಳಿ ಕ್ಷೇತ್ರದ ಪದ್ಮರಾಜ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಸರಕಾರ ಮಾಡಿದೆ. ಈ ಬಾರಿಯೂ ಅದೇ ರೀತಿಯಲ್ಲಿ ಮಾಡಲು ಹೊರಟಿದ್ದರು
ಆದರೆ, ನಾರಾಯಣ ಗುರುಗಳ ಅನುಯಾಯಿಗಳು ಬಿಡಲಿಲ್ಲ. ಎಚ್ಚೆತ್ತುಕೊಂಡ ಸರಕಾರ ಕೊನೆ ಘಳಿಗೆಯಲ್ಲಿ ಸರಿ ಮಾಡಿದೆ. ಗುರುಗಳ ಪಠ್ಯವನ್ನು ಸಮಾಜ ವಿಜ್ಞಾನದಲ್ಲಿ ಭೋದಿಸಲು ಮುಂದಾಗಿದೆ. ಪಠ್ಯ ಪುಸ್ತಕ ಮುದ್ರಣವಾಗಿ ಈಗಾಗಲೇ ವಿತರಣೆಯಾಗಿದೆ.
ಹಾಗಾಗಿ, ಸುತ್ತೋಲೆಯ ಮೂಲಕ ಸರಕಾರ ಸ್ಪಷ್ಟ ಸೂಚನೆ ನೀಡಿದೆ. ಈ ವಿಚಾರದಲ್ಲಿ ಹೋರಾಟ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರ್. ಪದ್ಮರಾಜ್ ಹೇಳಿದ್ದಾರೆ.
ಕೆಲವು ಪಕ್ಷದ ಕೆಲವು ರಾಜಕಾರಣಿಗಳು ನಮ್ಮಿಂದ ಆಯ್ತು ಎನ್ನುತ್ತಿದ್ದಾರೆ. ಈ ರೀತಿಯಾಗಿ ಕೆಲವರು ರಾಜಕೀಯ ಮಾಡಲು ಹೊರಟಿದ್ದಾರೆ. ಇಷ್ಟು ಸಮಯದ ಹೋರಾಟಕ್ಕೆ ಯಾರೂ ಬೆಂಬಲಿಸಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ, ಸರಿ ಮಾಡ್ತೇವೆ ಎಂದವರು ಇಲ್ಲ. ಪ್ರತಿಭಟಿಸುವಾಗ ಈ ರೀತಿಯ ವಿಚಾರ ಆಗೆ ಇಲ್ಲ ಎಂದಿದ್ದೀರಿ. ಪಠ್ಯ ಪುಸ್ತಕದಿಂದ ನಾರಾಯಣ ಗುರುಗಳ ಪಠ್ಯ ಕೈ ಬಿಟ್ಟಿಲ್ಲ, ಕೈ ಬಿಟ್ಟಿದ್ದು ಸುಳ್ಳು, ರಾಜಕೀಯಕ್ಕಾಗಿ ಮಾಡಿದ್ದೀರಿ ಎಂದಿದ್ದರು. ಅಂತವರು ಇವತ್ತು ಬೇರೆ ಬೇರೆ ರೀತಿಯ ಪೋಸ್ಟ್ ಹಾಕುತ್ತಿದ್ದಾರೆ. ನಾರಾಯಣ ಗುರುಗಳು ಇನ್ನಾದರೂ ನಿಮಗೆ ಒಳ್ಳೆಯ ಬುದ್ಧಿ ಕೊಡಲಿ. ನಾವೂ ಈಗಲೂ ಆಗ್ರಹವನ್ನು ಮಾಡುತ್ತಿದ್ದೇವೆ. ಜಗತ್ತಿನಲ್ಲಿ ಸಮಾನತವಾದಿಗಳ ಅದ್ಭುತವಾದ ವಿಚಾರಧಾರೆಗಳು, ಭಾರತ ವಿಶ್ವಗುರುವಾಗಲು ಅಂತವರ ವಿಚಾರಧಾರೆ ಅತ್ಯಗತ್ಯ. ಯಾರೋ ಒಬ್ಬ ಅಂತಹ ವಿಚಾರಧಾರೆ ಮುಚ್ಚಿಸಲು ನೋಡಿದ್ದು ಅಪರಾಧ. ಇನ್ನಾದರೂ ಇಂತಹ ಕೆಲಸಗಳಿಗೆ ಕೈ ಹಾಕಬೇಡಿ ಎಂದರು