ಉಡುಪಿ,ಜ 22(MSP): ಊರಿನಿಂದ ತೆರಳುವಾಗ ಪರಿಚಿತರು ನೀಡಿದ ಪಾರ್ಸೆಲನ್ನು ಕೊಂಡೊಯ್ದು ಅದರಲ್ಲಿ ನಿಷೇಧಿತ ಮಾತ್ರೆಗಳಿವೆ ಎಂಬ ಕಾರಣಕ್ಕೆ ಕುವೈಟ್ನಲ್ಲಿ ಜೈಲುಪಾಲಾಗಿದ್ದ ಬಸ್ರೂರು ಕಳಂಜಿ ನಿವಾಸಿ ಶಂಕರ ಪೂಜಾರಿ ಅವರು 7 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಸೋಮವಾರ ಬೆಳಗ್ಗೆ ಕುಂದಾಪುರಕ್ಕೆ ಆಗಮಿಸಿ ಹುಟ್ಟೂರು ತಲುಪಿದ್ದಾರೆ. ಮಾನಸಿಕವಾಗಿ ನೊಂದಿರುವ ಅವರಿಗೀಗ ವಿಶ್ರಾಂತಿಯ ಅಗತ್ಯವಿದೆ.
7 ತಿಂಗಳ ಹಿಂದೆ ನಾನು ಊರಿಗೆ ಬಂದು ಮರಳುವಾಗ ಕುವೈಟ್ನಲ್ಲಿರುವ ಫಾತಿಮಾ ಎನ್ನುವವರಿಗೆ ಕೊಡಿ ಎಂದು ಊರಿನ ಪರಿಚಿತರೊಬ್ಬರು ಕಟ್ಟೊಂದನ್ನು ನೀಡಿದ್ದರು. ಅದರೊಳಗೆ ಕುವೈಟ್ನಲ್ಲಿ ನಿಷೇಧಕ್ಕೊಳಗಾಗಿರುವ ಮಾತ್ರೆ ಇದೆ ಎಂಬುದು ನನಗೆ ಗೊತ್ತಿರಲಿಲ್ಲ. ಅಲ್ಲಿ ತಪಾಸಣೆ ವೇಳೆ ಅಮಾಯಕನಾದ ನನ್ನನ್ನು ವಿದೇಶಿ ನೆಲದ ಕಾನೂನಿನಂತೆ ಬಂಧಿಸಲಾಗಿತ್ತು. ವಿವಿಧ ಸಂಘಟನೆಗಳ ಪ್ರಯತ್ನದಿಂದ ಜ.೧೫ರಂದು ಕುವೈತ್ ನ್ಯಾಯಾಲಯದ ಮೂಲಕ ಬಿಡುಗಡೆ ಹೊಂದಿದ್ದೇನೆ ಎಂದರು.
ಉದ್ಯೋಗ ಕಳೆದುಕೊಂಡಿದ್ದೇನೆ: 15 ದಿನಗಳಿಗೊಮ್ಮೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆಯುತ್ತಿದ್ದರು. ಆದರೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಹಿತ ವಿವಿಧ ಸಂಘ - ಸಂಸ್ಥೆಗಳು, ಸ್ನೇಹಿತರ ಪ್ರಯತ್ನದಿಂದ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿ ನಿರಪರಾಧಿ ಎಂದು ಬಿಡುಗಡೆಯಾದೆ. ಆದರೆ ಕೆಲಸ ಮಾಡುತ್ತಿದ್ದ ಅಗ್ರಿಕಲ್ಚರಲ್ ಫುಡ್ ಪ್ರಾಡಕ್ಟ್ ಕಂಪೆನಿಯ ಉದ್ಯೋಗ ಕಳೆದುಕೊಂಡಿದ್ದೇನೆ. 5 ವರ್ಷ ಕೆಲಸ ಮಾಡಿದ ಅನುಭವ (ಸರ್ವಿಸ್) ಕೂಡಾ ನಷ್ಟವಾಗಿದೆ. ಮತ್ತೆ ನಾನು ವಿದೇಶಕ್ಕೆ ತೆರಳಿ ಕೆಲಸ ನಾಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.ಮುಂದೆ ಎನೂ ಮಾಡಬೇಕು ಎಂಬುವುದನ್ನು ಮುಂದಿನ ದಿನದಲ್ಲಿ ನಿರ್ಧರಿಸಲಿದ್ದೇನೆ. ಸದ್ಯ ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ನಿರ್ಧರಿಸಿದ್ದೇನೆ ಎಂದಿದ್ದಾರೆ.