ಕಾರ್ಕಳ, ಜು 13 (DaijiworldNews/DB): ಕಾರ್ಕಳ ಹೃದಯಭಾಗದಲ್ಲಿರುವ ಮಂಗಳೂರು ರಸ್ತೆಯ ದುಸ್ಥಿತಿ ಪ್ರತಿ ಮಳೆಗಾಲದಲ್ಲಿಯೂ ಹೇಳತೀರದ್ದಾಗಿದೆ. ಮಳೆಗಾಲ ಬಂತೆಂದರೆ ವಾಹನ ಸಂಚಾರಕ್ಕೆ ತೀರಾ ಅಡಚಣೆ ಈ ರಸ್ತೆಯಲ್ಲಾಗುತ್ತಿದೆ. ಆದರೆ ಪುರಸಭೆ ಆಡಳಿತ, ಜನಪ್ರತಿನಿಧಿಗಳು ಕಂಡೂ ಕಾಣದಂತಿದ್ದಾರೆ.
ಭವಾನಿ ಮಿಲ್ನಿಂದ ಬಂಗ್ಲೆಗುಡ್ಡೆ ಜಂಕ್ಷನ್ ವರೆಗೆ ಬೈಪಾಸ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯು ನಿರ್ಮಿಸಿದ ಬಳಿಕ ಅಂದರೆ ಸುಮಾರು 12 ವರ್ಷಗಳ ಹಿಂದೆ ಕಾರ್ಕಳದ ಕುಂಟಲ್ಪಾಡಿ -ಮೂರುಮಾರ್ಗದ ವರೆಗಿನ ರಸ್ತೆಯೂ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿತ್ತು. ಇದರ ಮಧ್ಯ ಭಾಗದಲ್ಲಿ ಆನೆಕೆರೆಯಿಂದ ಮೂರುಮಾರ್ಗದ ವರೆಗೆ ಕಾಣಸಿಗುವ ರಸ್ತೆಯೇ ಮಂಗಳೂರು ರಸ್ತೆ. ಲೋಕೋಪಯೋಗಿ ಇಲಾಖೆಯು ಈ ರಸ್ತೆಯನ್ನು ಕಾರ್ಕಳ ಪುರಸಭೆಗೆ ಹಸ್ತಾಂತರಿಸಿದ ಬಳಿಕ ರಸ್ತೆ ಅಭಿವೃದ್ದಿಯಲ್ಲಿ ಭಾರೀ ಬದಲಾವಣೆಗಳೇನೂ ಆಗಿಲ್ಲ. ಪರಿಣಾಮ ರಸ್ತೆ ಹೊಂಡಗುಂಡಿಗಳಿಂದ ಕೂಡಿ ಮಳೆಗಾಲದಲ್ಲಿ ಸಂಚಾರಕ್ಕೇ ಸಂಚಕಾರ ತಂದೊಡ್ಡುತ್ತಿದೆ.
ರಸ್ತೆ ಮುಂದಿಟ್ಟು ರಾಜಕೀಯ
ಮಂಗಳೂರು ರಸ್ತೆಯ ದುಸ್ಥಿತಿ ಮುಂದಿಟ್ಟು ರಾಷ್ಟ್ರೀಯ ಪಕ್ಷಗಳು ಮನೋರಂಜನೆ ಕ್ರೀಡಾಕೂಟಗಳನ್ನು ಆಯೋಜಿಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದವು. ಆದರೆ ಅದೇ ಪ್ರತಿಭಟನೆಯಲ್ಲಿ ನಿರತರಾಗಿದ್ದವರು ಪುರಸಭೆಯ ಅಧ್ಯಕ್ಷಗಾದಿಗೂ ಏರಿದ್ದರು. ಆದರೆ ಇಲ್ಲಿವರೆಗೆ ರಸ್ತೆ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಮಳೆ ಮುಗಿಯುತ್ತಿದ್ದಂತೆ ತೇಪೆ ಕಾಮಗಾರಿ, ಆ ಬಳಿಕ ಡಾಂಬರೀಕರಣ ಪ್ರತಿ ವರ್ಷ ನಡೆಯುತ್ತದೆ. ಮತ್ತೆ ಮಳೆಗಾಲ ಆರಂಭವಾದಂತೆ ರಸ್ತೆಯಲ್ಲಿ ಹೊಂಡ ಬೀಳುತ್ತದೆ.
ಬಾಳೆಗಿಡ ನೆಟ್ಟ ರಿಕ್ಷಾ ಚಾಲಕ
ಕಳೆದ ವರ್ಷ ಇದೇ ರಸ್ತೆಯಲ್ಲಿ ತೆಳ್ಳಾರಿನ ರಿಕ್ಷಾ ಚಾಲಕರೊಬ್ಬರು ಬಾಳೆಗಿಡ ನೆಟ್ಟು ಸುರಿಯುತ್ತಿದ್ದ ಮಳೆಯಲ್ಲಿ ತನ್ನ ರಿಕ್ಷಾವನ್ನು ರಸ್ತೆಯ ಹೊಂಡಕ್ಕೆ ಇಳಿಸಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದರು.
ಈ ರಸ್ತೆಯಲ್ಲಿ ಪ್ರತಿದಿನ ದ್ವಿಚಕ್ರ, ತ್ರಿಚಕ್ರ, ಲಘ ಹಾಗೂ ಘನ ವಾಹನಗಳು ಸಂಚಾರ ನಡೆಸುತ್ತವೆ. ರಸ್ತೆ ಪೂರ್ತಿ ಭಾರೀ ಗಾತ್ರದ ಹೊಂಡಗಳಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುವುದಲ್ಲದೆ, ವಾಹನಗಳ ಬಿಡಿ ಭಾಗಗಳಿಗೂ ಹಾನಿ ಉಂಟಾಗುತ್ತಿದೆ. ಕಿರಿದಾಗಿರುವ ಈ ರಸ್ತೆಯಲ್ಲಿ ನಡೆದಾಡಿಕೊಂಡು ಹೋಗುವ ಪಾದಚಾರಿಗಳಿಗೆ ಹೊಂಡದಲ್ಲಿ ತುಂಬಿಕೊಂಡಿರುವ ಕೆಸರು ನೀರಿನ ಅಭಿಷೇಕವಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಕಾಂಕ್ರೀಟ್ಕರಣಗೊಂಡರೆ ಪರಿಹಾರ
ಆನೆಕೆರೆಯಿಂದ ಮೂರುಮಾರ್ಗದ ವರೆಗಿನ ರಸ್ತೆಯನ್ನು ಕಾಂಕ್ರೀಟ್ಕರಣ ಮಾಡುವ ಮೂಲಕ ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಸೆಗೆ ಶಾಶ್ವತ ಪರಿಹಾರ ದೊರಕಲಿದೆ. ಅದರೊಂದಿಗೆ ರಸ್ತೆಯ ಇಕ್ಕಲೆಗಳಲ್ಲಿ ಚರಂಡಿ ವ್ಯವಸ್ಥೆಗಳು ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.
ಸಚಿವರಿಗೆ ಮನವಿ
ಮಂಗಳೂರು ರಸ್ತೆ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ಇದರ ಅಭಿವೃದ್ಧಿ ಕುರಿತು ಸಂಬಂಧಪಟ್ಟ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ ತಿಳಿಸಿದ್ದಾರೆ.