ಕುಂದಾಪುರ, ಜು 13 (DaijiworldNews/DB): ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರಕ್ಕೆ ವಿಶೇಷ ಗಮನ ಹರಿಸಲಾಗುವುದು. ಹೊಸ ವಿಧಾನ ಅಳವಡಿಕೆಗೆ ಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮರವಂತೆಯ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬುಧವಾರ ಮಾತನಾಡಿದ ಅವರು, ಪ್ರತಿವರ್ಷ ಇಲ್ಲಿ ಕಡಲ್ಕೊರೆತ ಸಂಭವಿಸಿ ಜನರಿಗೆ ಆಗುತ್ತಿರುವ ಸಮಸ್ಯೆ ಅರಿವಿಗೆ ಬಂದಿದೆ. ಇದನ್ನು ನಿಯಂತ್ರಿಸಲು ತತ್ಕ್ಷಣ ಕೆಲಸ ಆರಂಭಿಸಬೇಕಾಗಿದೆ. ತಾತ್ಕಾಲಿಕವಾಗಿ ತುರ್ತು ಕಾಮಗಾರಿಗೆ ಬೇಕಾಗುವಷ್ಟು ಅನುದಾನವನ್ನು ಕೂಡಲೇ ಒದಗಿಸಲಾಗುವುದು ಎಂದರು.
ಇಡೀ ಕಡಲ ತೀರ ಕಡಲ್ಕೊರೆತ ತಡೆಗೆ ಕಲ್ಲು ಹಾಕುವ ಕಾರ್ಯ ಸಮರ್ಪಕವಾಗಿಲ್ಲ. ತಳಮಟ್ಟವನ್ನು ಸರಿಪಡಿಸಿಕೊಂಡು ಅಚ್ಚುಕಟ್ಟಾಗಿ ಕಲ್ಲು ಹಾಕಬೇಕು. ಎಲ್ಲೆಲ್ಲಿ ಕಾಮಗಾರಿ ಆಗಿದೆಯೋ ಅದನ್ನು ಪರಿಶೀಲಿಸಿ, ಕಳಪೆ ಆಗಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ಶಾಶ್ವತ ಕಾರ್ಯಕ್ರಮಕ್ಕೆ ಇಡೀ ಕಡಲತೀರದ ಡಿಪಿಆರ್ ಸಿದ್ದಪಡಿಸಲು ಸೂಚನೆ ನೀಡಲಾಗಿದೆ. ವಿಶೇಷ ಅನುದಾನದ ಮೂಲಕ ಅಭಿವೃದ್ದಿ ಪಡಿಸಲಾಗುವುದು. ಮರವಂತೆ ಬಂದರು ಅಭಿವೃದ್ದಿ 184 ಕೋಟಿ ರೂ. ಟೆಂಡರ್ ಆಗಿದ್ದು ತಕ್ಷಣ ಆ ಕೆಲಸವನ್ನು ಆರಂಭಿಸಲಾಗುವುದು ಎಂದವರು ತಿಳಿಸಿದರು.
ಈಗಾಗಲೇ ಮಳೆಯಿಂದ ಸ್ವಲ್ಪ ಹಾನಿಯಾದರೂ ತಕ್ಷಣ 10 ಸಾವಿರ ರೂ. ಹಾಗೂ ಮನೆ ಬಿದ್ದ ಪ್ರಕರಣಗಳಿದ್ದರೆ 5 ಲಕ್ಷ ರೂ. ನೀಡುವಂತೆ ಜಿಲ್ಲಾದಿಕಾರಿಗಳಿಗೆ ಆದೇಶ ನೀಡಲಾಗುವುದು ಎಂದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಕಂದಾಯ ಸಚಿವ ಆರ್. ಅಶೋಕ್, ಹಿಂದುಳಿದ ವರ್ಗಗಳ ಅಭಿವೃದ್ದಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮುಖ್ಯ ಕಾರ್ಯದರ್ಶಿ ಜಿ. ಜಗದೀಶ, ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಸಹಾಯಕ ಆಯುಕ್ತ ಕೆ. ರಾಜು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಮೊದಲಾದವರು ಉಪಸ್ಥಿತರಿದ್ದರು.