ಉಡುಪಿ, ಜ 22(MSP): ಮಹಿಳೆಯ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಅಶ್ಲೀಲ, ನಿಂದನಾತ್ಮಕ ಮತ್ತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸುತ್ತಿದ್ದ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಮಧುಮೋಹನ್ ರಾಜ್ (37) ಎಂದು ಗುರುತಿಸಲಾಗಿದೆ.
ಈತ ಮೂಲತಃ ಕಾಸರಗೋಡು ಕುತ್ತಿ ಕೋಲ್ ಬೇರ್ತೂಪಾರ ನಿವಾಸಿ ಯಾಗಿದ್ದು ಪ್ರಸ್ತುತ ಮೂಡು ಅಂಜಾರು ಸರಕಾರಿ ಜಿ.ಪಂ. ಪ್ರಾಥಮಿಕ ಶಾಲೆಯ ಬಳಿ ವಾಸವಾಗಿದ್ದ. ಆರೋಪಿಯೂ ’ಸ್ನೇಹಾ ಸುರೇಶ್ ’ ಎಂಬ ಹೆಸರಿನಲ್ಲಿ ಖಾತೆ ತೆರೆದು ಅವಹೇಳನಕಾರಿ ಬರಹ ಪ್ರಕಟಿಸುತ್ತಿದ್ದ ಬಗ್ಗೆ ಉಡುಪಿಯ ಗಿರೀಶ್ ಅಂಚನ್ ಜ.17ರಂದು ದೂರು ನೀಡಿದ್ದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಫೆ. 2ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈತ ಕಡಿಯಾಳಿಯ ಯುವತಿಗೂ ಫೇಸ್ ಬುಕ್ ನಲ್ಲಿ ಕಿರುಕುಳ ನೀಡಿದ ಬಗ್ಗೆ ಆಕೆಯ ತಾಯಿ 2013 ರಿಂದ 2017ರ ಅವಧಿಯಲ್ಲಿ 4 ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಮಹಿಳಾ ಆಯೋಗಕ್ಕೂ ದೂರು ನೀಡಲಾಗಿತ್ತು. ಈತ ಸ್ವಾಮೀಜಿಯೊಬ್ಬರ ಬಗ್ಗೆ, ವಿದ್ಯಾ ಸಂಸ್ಥೆಯೊಂದರ ವಿರುದ್ದವೂ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ. ಈಗ ಈತನ ಫೇಸ್ಬುಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.