ಉಡುಪಿ, ಜು 13(DaijiworldNews/MS): ಅತಿವೃಷ್ಠಿಯಿಂದ ಹಾನಿಗೊಳಗಾದ ಕಾರವಾರ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗೆ ಮುಂದಿನ ವಾರ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಇಂದು ಉಡುಪಿ ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.
ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉಡುಪಿಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿ, ದೀರ್ಘಕಾಲದ ಮತ್ತು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು
ಈ ವರ್ಷ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಬಂದಿದೆ. ಇದುವರೆಗೂ 300ಕ್ಕಿಂತ ಹೆಚ್ಚು ಜನರನ್ನು ಪ್ರವಾಹ ಸ್ಥಳದಿಂದ ಸ್ಥಳಾಂತರ ಮಾಡಿ ರಕ್ಷಣೆ ಮಾಡಲಾಗಿದೆ. 32 ಜೀವ ಹಾನಿಯಾಗಿದ್ದು, 5 ಜನ ನಾಪತ್ತೆಯಾಗಿದ್ದಾರೆ. ಮಳೆ ಆಗಿರುವ ಜಿಲ್ಲೆಗಳಲ್ಲಿ 14 ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. 4 ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ತಂಡಗಳು ಕೆಲಸ ಮಾಡುತ್ತಿವೆ ಎಂದರು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಕೃಷಿ ಮತ್ತು ತೋಟಗಾರಿಕೆಯ 355 ಹೇಕ್ಟರ್ ಪ್ರದೇಶ ಬೆಳೆ ಹಾನಿಗೊಳಗಾಗಿದೆ. 1062 ಮನೆಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ (ಪಿಡಬ್ಲ್ಯೂಡಿ ಮತ್ತು ಆರ್.ಡಿ.ಪಿ.ಆರ್) ಸೇರಿ 2,187 ಕಿ.ಮೀ ರಸ್ತೆ ಹಾನಿಗೊಳಗಾಗಿದೆ ಎಂದು ಮಾಹಿತಿ ನೀಡಿದರು.
ಪ್ರವಾಹದಿಂದ ಹಾನಿಗೊಳಗಾದ ಮನೆ ಮತ್ತು ಬೆಳೆ ಹಾನಿಗೆ ಪರಿಹಾರವನ್ನು ನೀಡಲು ಕೆಲವು ಹೊಸ ನಿಯಮಗಳನ್ನು ಮಾಡಿ ತುರ್ತಾಗಿ ಪರಿಹಾರ ಧನವನ್ನು ಹೆಚ್ಚಿಸಿ ನೀಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.