ಕಾಸರಗೋಡು, ಜು 13(DaijiworldNews/MS): ಕಾಸರಗೋಡು ಜಿಲ್ಲೆಯ ಕುಂಬಳೆ ಹೊಸದುರ್ಗ ಎಂಬಲ್ಲಿ ಆಳ ಸಮುದ್ರದಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಹಡಗೊಂದು ಗೋಚರಿಸಿದೆ. ಹಡಗಿನಲ್ಲಿ ಬಳಸಲಾದ ಬೆಳಕಿನ ಪ್ರಖರತೆ ಸಮುದ್ರ ತೀರದಾದ್ಯಂತ ಕಾಣಿಸಿಕೊಂಡಿದೆ.
ನೌಕೆಯನ್ನು ಗಮನಿಸಿದ ಕರಾವಳಿ ಜಾಗೃತ ಸಮಿತಿ ಸದಸ್ಯರು ಕರಾವಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕರಾವಳಿ ಸಂರಕ್ಷಣಾ ಪಡೆಗೆ ಸೇರಿದ ಹಡಗುಗಳು ಮತ್ತು ಭಾರತೀಯ ನೌಕಾಪಡೆಯ ಹಡಗುಗಳು ಬಂದರುಗಳಲ್ಲದೇ ಇತರೆಡೆಗಳಲ್ಲಿ ಸಮುದ್ರ ದಡದ ಮೂಲಕ ಸಾಗುವುದಿಲ್ಲ. ಆದರೆ ಇಲ್ಲಿ ಹಡಗೊಂದು ಸಮುದ್ರ ತೀರದಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸಮುದ್ರ ಮಾರ್ಗವಾಗಿ ಭಯೋತ್ಪಾದಕರು ಸಮುದ್ರದ ಮೂಲಕ ದೇಶಕ್ಕೆ ನುಸುಳುತ್ತಿರುವ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಇದಲ್ಲದೆ ಮಾದಕ ದ್ರವ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಚಿನ್ನ ಕಳ್ಳಸಾಗಣೆಯೂ ಸಮುದ್ರ ಮಾರ್ಗದ ಮೂಲಕ ನಡೆಯುತ್ತಿದೆ. ರಾತ್ರಿ ವೇಳೆ ಇಂತಹ ಘಟನೆಗಳು ಹೆಚ್ಚಾಗಿ ನಡೆಯುವ ಸಾಧ್ಯತೆ ಇದ್ದು,ಈ ಬಗ್ಗೆ ಕೇಂದ್ರ ಗುಪ್ತಚರ ವಿಭಾಗದಿಂದ ತನಿಖೆ ನಡೆಸುತ್ತವೆ. ಒಟ್ಟಾರೆ ಭಾರತೀಯ ನೌಕಾಪಡೆ ಮತ್ತು ಕರಾವಳಿ ಸಂರಕ್ಷಣಾ ಪಡೆಗೆ ಜಾಗೃತವಾಗಿರಲು ಆದೇಶ ನೀಡಲಾಗಿದೆ. ಈ ಹಡಗನ್ನು ಪತ್ತೆಹಚ್ಚಲು ಅಧಿಕೃತ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ.