ಉಡುಪಿ, ಜು 12 (DaijiworldNews/HR): ಜಿಲ್ಲೆಯನ್ನು ನೆರೆ ಪೀಡಿತ ಜಿಲ್ಲೆ ಎಂದು ಘೋಷಿಸಿ ನೆರೆ ಪರಿಹಾರಕ್ಕಾಗಿ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ, ಕಾರ್ಕಳ ಮತ್ತು ಕಾಪು ವಿಧಾನಸಬಾ ಕ್ಷೇತ್ರಗಳ ವಿವಿಧ ಭಾಗಗಳಲ್ಲಿ ಮಳೆಯಿಂದಾಗಿ ವಿಪರೀತ ಹಾಣಿ ಉಂಟಾಗಿದೆ. ಬೈಂದೂರಿನ ಣಾವುಂದ. ಮರವಂತೆ, ಉಪ್ಪುಂದ ಭಾಗದಲ್ಲಿ ಹಲವಾರು ಸೇತುವೆಗಳು ಮತ್ತು ಕಾಲು ಸೇತುವೆಗಳು ಹಾನಿಯಾಗಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾಪು ವಿಧಾನ ಸಭಾ ಕ್ಷೇತ್ರದ ಮೂಳೂರು, ಕೊಟ್ಟಂ ಕರಾವಳಿ ಭಾಗದಲ್ಲಿ ಸಮುದ್ರ ಕೊರೆತದಿಂದಾಗಿ ಮೀನುಗಾರರು ತುಂಬಾ ತೊಂದರೆಗೊಳಗಾಗಿದ್ದಾರೆ, ಉಡುಪಿಯ ಕಲ್ಲಂಕ - ಗುಂಡಿಬೈಲ್ ರಸ್ತೆ, ಪರ್ಕಳ ರಾಷ್ಟ್ರೀಯ ಹೆದ್ದಾರಿ, ಇಂದ್ರಾಳಿ ರೈಲ್ವೆ ಸೇತುವೆ ಸಂಪೂರ್ಣ ಹದಗೆಟ್ಟು ಪ್ರಯಾಣಿಕರು ಸಂಚಾರಕ್ಕೆ ಬಹಳ ತೊಂದರೆ ಅನುಭವಿಸುವಂತಾಗಿದೆ. ಕರಾವಳಿ ಹೈವೇಯಿಂದ ಮಲ್ಪೆ, ಆದಿಉಡುಪಿ, ಪಂದುಬಿಟ್ಟು ತನಕದ ರಸ್ತೆಗಳು ತೀರಾ ಕೊಚ್ಚಿ ಹೋಗಿದೆ, ಹೀಗಾಗಿ ತುರ್ತು ಕಾಮಗಾರಿ ಮತ್ತು ತುರ್ತು ಪರಿಹಾರ ಕೆಲಸಗಳು ಸಮಾರೋಪಾದಿಯಲ್ಲಿ ನಡೆಯಬೇಕಾಗಿದ್ದು ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಉಡುಪಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಉಡುಪಿ ಜಿಲ್ಲಾ ಕಾಂಗ್ರೆಸ್ ಸರಕಾರಕ್ಕೆ ಮನವಿಯನ್ನು ಸಲ್ಲಿಸಿತು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ಎಮ್ .ಎ . ಗಪೂರ್, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೊ, ವಕ್ತಾರರಾದ ಭಾಸ್ಕರ ರಾವ್ ಕಿದಿಯೂರು, ಮುಖಂಡರಾದ ಗಣೇಶ್ ಕೋಟ್ಯಾನ್, ಅಶೋಕ್ ನ್ಯಾಯರಿ, ಸುಧೀರ್ ಪಡುಬಿದ್ರೆ ಉಪಸ್ಥಿತರಿದ್ದರು ಸರಕಾರದ ಪರವಾಗಿ ಅಪರ ಜಿಲ್ಲಾಧಿಕಾರಿ ವೀಣಾ ಮನವಿಯನ್ನು ಸ್ವೀಕರಿಸಿದರು.