ಕೋಟ, ಜು 12 (DaijiworldNews/MS): ಮಳೆಯಲ್ಲಿ ಆಟವಾಡದಂತೆ ತಾಯಿ ಬುದ್ದಿ ಹೇಳಿದ್ದಕ್ಕೆ ಕೋಪಗೊಂಡ ಮಗ ನೇಣಿಗೆ ಶರಣಾದ ಘಟನೆ ಜು.11ರಂದು ಮಧ್ಯಾಹ್ನ ವೇಳೆ ಕಾರ್ಕಡ ಎಂಬಲ್ಲಿ ನಡೆದಿದೆ.
ಮೃತ ಬಾಲಕನನ್ನು ಕಾರ್ಕಡ ನಿವಾಸಿ ಲಕ್ಷ್ಮಿ ಎಂಬವರ ಮಗ, ಕೋಟ ವಿವೇಕ ಹೈಸ್ಕೂಲಿನಲ್ಲಿ 9ನೇ ತರಗತಿಯ ವಿದ್ಯಾರ್ಥಿ ನಾಗೇಂದ್ರ (14) ಎಂದು ಗುರುತಿಸಲಾಗಿದೆ. ಲಕ್ಷ್ಮೀ ಕಾರ್ಕಡದಲ್ಲಿ ವೀರಭದ್ರ ಕ್ಯಾಂಟೀನ್ ನಡೆಸಿಕೊಂಡಿದ್ದು, ಶಾಲಾ ರಜೆ ಹಿನ್ನೆಲೆಯಲ್ಲಿ ನಾಗೇಂದ್ರ ಕಾರ್ಕಡ ಶಾಲಾ ಮೈದಾನಲ್ಲಿ ಆಡಲು ಹೋಗಿದ್ದ ಎನ್ನಲಾಗಿದೆ. ಅಪರಾಹ್ನ ಮನೆಗೆ ಬಂದಾಗ ತಾಯಿ ಮಳೆಯಲ್ಲಿ ಆಟವಾಡದಂತೆ ಬುದ್ದಿ ಹೇಳಿದ್ದರು. ಅದೇ ಸಂದರ್ಭ ಕ್ಯಾಂಟೀನ್ನಲ್ಲಿ ಗ್ರಾಹಕರಿದ್ದುದರಿಂದ ನಾಗೇಂದ್ರನಿಗೆ ಮನೆಗೆ ಹೋಗಿ ಊಟ ಹಾಕಿಕೊಂಡು ಊಟ ಮಾಡಲು ತಾಯಿ ಹೇಳಿದ್ದರು.
ಆದರೆ ಇಷ್ಟಕ್ಕೆ ಹಠ ಸ್ವಭಾವದ ನಾಗೇಂದ್ರ, ಕೋಪಗೊಂಡು ಮನೆಯಲ್ಲಿ ಬಟ್ಟೆ ಹಾಕಲು ಸಿಟೌಟ್ನಲ್ಲಿ ಕಟ್ಟಿದ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ನಾಗೇಂದ್ರನ ತಂದೆ ಕೃಷ್ಣ ಪೂಜಾರಿ ಎರಡು ವರ್ಷದ ಹಿಂದೆ ಮೃತಪಟ್ಟಿದ್ದು, ಅವರ ಚಿಕಿತ್ಸೆಗಾಗಿ ಸಾಕಷ್ಟು ಸಾಲ ಮಾಡಲಾಗಿತ್ತು. ಗಂಡನ ಸಾವಿನ ನಂತರ ಲಕ್ಷ್ಮಿ ಪೂಜಾರ್ತಿ ಚಿಕ್ಕ ವಯಸ್ಸಿನ ಮಗ ಮಗಳೊಂದಿಗೆ ಪುಟ್ಟ ಕ್ಯಾಂಟೀನ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಮುಂದೆ ಮನೆಗೆ ಆಧಾರವಾಗಬೇಕಾಗಿದ್ದ ಮಗನೂ ಆತ್ಮಹತ್ಯೆ ಶರಣಾಗಿದ್ದರಿಂದ ತಾಯಿಗೆ ದಿಕ್ಕು ತೋಚದಂತಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821