ಉಳ್ಳಾಲ, ಜು 11 (DaijiworldNews/HR): ಮಹಿಳೆಯೋರ್ವರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಉಳ್ಳಾಲ ಠಾಣೆ ವ್ಯಾಪ್ತಿಯ ಮುಕ್ಕಚ್ಚೇರಿ ಬಳಿ ಭಾನುವಾರ ಪತ್ತೆಯಾಗಿದ್ದು, ಈ ಅನುಮಾನಸ್ಪದ ಸಾವಿಗೆ ಸಂಬಂಧಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಜಂಶೀರಾ ಅವರ ಪತಿ ಇಮ್ರಾನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಿಲ್ಲತ್ ನಗರದ ಮನೆಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿ ಆರೋಪಿ ಪತಿ ಇಮ್ರಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯೊಳಗಿನಿಂದ ಇಮ್ರಾನ್ ನ್ನು ವಶಕ್ಕೆ ಪಡೆದುಕೊಂಡಿದ್ದರು. ಮೃತದೇಹವನ್ನು ನಾಟೆಕಲ್ ಕಣಚೂರು ಆಸ್ಪತ್ರೆಗೆ ಶವಮಹಜರಿಗೆ ಕಳುಹಿಸಿದ್ದರು.
ಜಂಶೀರಾ ಸಾವಿನ ಕುರಿತು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇನ್ನು ವಿಚಾರಣೆ ನಡೆಸಿ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಗಣನೆಗೆ ತೆಗೆದುಕೊಂಡು, ಆತ್ಮಹತ್ಯೆಗೆ ಪ್ರಚೋದನೆಯಡಿ ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಂಪತಿ ವೈಮನಸ್ಸಿನಿಂದ, ಎಂಟು ತಿಂಗಳ ಮಗುವಿಗೆ ಆಸರೆಯಾಗಿದ್ದ ತಾಯಿಯೂ ಇನ್ನಿಲ್ಲವಾಗಿ ಇದೀಗ ಮಗು ಅನಾಥವಾಗಿದೆ.