ಮುಲ್ಕಿ, ಜು 11 (DaijiworldNews/HR): ಭಾರೀ ಮಳೆಯಿಂದಾಗಿ ನೆರೆ ಪೀಡಿತವಾಗಿ ಎಕರೆಗಟ್ಟಲೆ ಕೃಷಿ ಹಾನಿ ಸಂಭವಿಸಿರುವ ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ಯ, ಕುದುರು, ಬೈಲಗುತ್ತು ಪ್ರದೇಶಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ನೆರೆ ಬಂದು ಸಂತ್ರಸ್ತರಾದ ಸ್ಥಳೀಯ ಕೃಷಿಕರಾದ ಸತೀಶ್ ಶೆಟ್ಟಿ ಬೈಲಗುತ್ತು, ಉಷಾ ಶೆಟ್ಟಿ ವೇದಾವತಿ ಉಳ್ಯ ಕುದುರು ಮತ್ತಿತರರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಬಳಿ ತೋಡಿಕೊಂಡರು.
ಈ ಭಾಗದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ನಂದಿನಿ ಉಕ್ಕಿ ಹರಿದು ಎಕರೆಗಟ್ಟಲೆ ಕೃಷಿ ನಾಶ ಉಂಟಾಗುತ್ತಿದೆ. ಈ ಬಾರಿ ಸುಮಾರು 500ಕ್ಕೂ ಹೆಚ್ಚು ಎಕರೆ ಕೃಷಿನಾಶ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಹಾನಿ ಸಂಭವಿಸಿದೆ. ಉಳ್ಯ ಪರಿಸರದಲ್ಲಿ ಸುಮಾರು 5ಕಿಮೀ ಉದ್ದಕ್ಕೆ ತಡೆಗೋಡೆ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು
ಇನ್ನು ಈ ಭಾಗದಲ್ಲಿ ದಾರಿದೀಪ ಅವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳಿಗೆ ಮನದಾಣಿಸಿದ ಸ್ಥಳೀಯರು ಕೂಡಲೇ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಪಂಚಾಯತ್ ವ್ಯಾಪ್ತಿಯ ಬೈಲಗುತ್ತು ಪ್ರದೇಶದಲ್ಲಿ ಕೃಷಿ ಹಾನಿಯನ್ನು ವೀಕ್ಷಿಸಿ, ಸುರತ್ಕಲ್ ಚೇಳಾಯರು ಮಧ್ಯ ಸಂಪರ್ಕ ರಸ್ತೆಯ ಕಿರು ಸೇತುವೆ ಮುಳುಗಡೆಯಾಗಿರುವುದನ್ನು ಪರಿಶೀಲಿಸುತ್ತಿರುವಾಗ ಸ್ಥಳೀಯರೊಬ್ಬರು ನೆರೆ ನೀರಿನಲ್ಲಿ ಮನೆಗೆ ಅಕ್ಕಿ ದಿನಸಿ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿರುವ ದೃಶ್ಯವನ್ನು ವೀಕ್ಷಿಸಿದರು
ಬಳಿಕ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಮಾತನಾಡಿ ಕೂಡಲೇ ಅಧಿಕಾರಿಗಳು ಕೃಷಿನಾಶಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತರಿಗೆ ಪರಿಹಾರ ನೀಡಲು ಸೂಚನೆ ನೀಡಿದರು.
ಕೆಮ್ರಾಲ್ ಗ್ರಾಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಸದಸ್ಯ ನವೀನ್ ಸಾಲ್ಯಾನ್, ರೇವತಿ ಮಾಜೀ ಜೀಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಲ್ಕಿ ತಹಶಿಲ್ದಾರ್ ಗುರುಪ್ರಸಾದ್, ಆರ್ ಐ ದಿನೇಶ್, ವಿ ಎ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.