ವಿಟ್ಲ, ಜು 11(DaijiworldNews/MS): ವೈದ್ಯನೊಬ್ಬ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿಯ ನಾಟಕವಾಡಿ, ಲೈಂಗಿಕ ಕಿರುಕುಳ ನೀಡಿ ಬಳಿಕ ಜೀವಬೆದರಿಕೆಯೊಡ್ದಿದ ಸಂಬಂಧ ವಿಟ್ಲ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದ್ದು ಆರೋಪಿ ವೈದ್ಯನನ್ನು ಪೊಲೀಸರು ಜು.11 ರ ಸೋಮವಾರ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಮಾಣಿ ನಿವಾಸಿ, ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಡಾ. ಅನುಷ್ ನಾಯ್ಕ(35) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನಲೆ: 2021ರ ಮಾ. ೩ ರಂದು ಮಾಣಿ ಸರಕಾರಿ ಆಸ್ಪತ್ರೆಯ ಬಳಿಯಲ್ಲಿ ಸಿಕ್ಕಿದ್ದ ಅಪ್ರಾಪ್ತೆಯನ್ನು ಮಾತಿಗೆಳೆದಿದ್ದ ಡಾ. ಅನುಷ್ ನಾಯ್ಕ ಪ್ರೀತಿಸುತ್ತಿರುವುದಾಗಿ ತಿಳಿಸಿ, ಬಳಿಕ ಸ್ವಲ್ಪ ಸಮಯದ ನಂತರ, ಆರೋಪಿಯು ಆತನ ಕಾರಿನಲ್ಲಿ ಮನೆಯ ಕಡೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದ.
ಇದಾದ ಬಳಿಕ ಡಾ. ಅನುಷ್ ಕಳೆದ ಮೇ ತಿಂಗಳಿನಲ್ಲಿ ಮದುವೆಯಾಗಿದ್ದು, ಸಂತ್ರಸ್ತೆ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಿದ್ದು ಇದರಿಂದ ಕೋಪಗೊಂಡು ನೀನು ಮಾತನಾಡದೆ ಇದ್ದರೆ ನಿನ್ನನ್ನು ಹಾಗೂ ನಿನ್ನ ತಂದೆ-ತಾಯಿಯನ್ನು ಕೊಂದು ಹಾಕುವುದಾಗಿ ಬೆದರಿಕೆ ಹಾಕಿದ್ದ ಎಂದು, ಬಾಲಕಿಯ ತಾಯಿ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಅ. ಕ್ರ. 116/2020 ಕಲಂ: 8, 12 Pocso act & 506 IPC ಯಂತೆ ಪ್ರಕರಣ ದಾಖಲಾಗಿದೆ.